ಗಟ್ಟಿಗೊಂಡ ಬಾಂಧವ್ಯ; ಹೊಸ ಎತ್ತರಕ್ಕೆ ದ್ವಿಪಕ್ಷೀಯ ಸಂಬಂಧ

PM Modi UAE
Published on

ಅರಬ್ ಸಂಯುಕ್ತ ಸಂಸ್ಥಾನ(ಯುಎಇ)ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಭೇಟಿ ಯಶಸ್ವಿಯಾಗಿದೆ. ಯುಎಇ ಅಧ್ಯಕ್ಷ ಶೇಖ್ ಮಹಮದ್ ಬಿನ್ ಝುಯೇದ್ ಅಲ್ ನಹ್ಯಾನ್​ರೊಂದಿಗೆ ಮಹತ್ವದ ಮಾತುಕತೆ ನಡೆದು, ಹಲವು ವಿಷಯಗಳ ಮೇಲೆ ಸಹಮತಕ್ಕೆ ಬರಲಾಗಿದೆ. ಪ್ರಧಾನಿ ಮೋದಿ 2015ರಿಂದೀಚೆಗೆ ಯುಎಇಗೆ ನೀಡಿದ ಏಳನೇ ಭೇಟಿ ಇದಾಗಿದೆ ಎಂಬುದು ಗಮನಾರ್ಹ. ಮಂಗಳವಾರ ಅಬುಧಾಬಿಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ವಿಮಾನ ನಿಲ್ದಾಣದಲ್ಲಿ ಅಧ್ಯಕ್ಷ ನಹ್ಯಾನ್ ಆತ್ಮೀಯವಾಗಿ ಸ್ವಾಗತಿಸಿದ್ದು ಮತ್ತು ‘ನಾನು ಯುಎಇಗೆ ಆಗಮಿಸಿದಾಗಲೆಲ್ಲ ನನ್ನದೇ ಮನೆ ಹಾಗೂ ಕುಟುಂಬಕ್ಕೆ ಬಂದ ಅನುಭವವಾಗುತ್ತದೆ’ ಎಂದು ಮೋದಿ ಹೇಳಿದ್ದು ಸ್ನೇಹಬಾಂಧವ್ಯಕ್ಕೆ ಸಾಕ್ಷಿಯಾಗಿತ್ತು.

ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಒತ್ತು ನೀಡಲಾಗಿದ್ದು, ಇಂಧನ, ಮೂಲಸೌಕರ್ಯ, ಡಿಜಿಟಲ್, ಫಿನ್​ಟೆಕ್, ವಾಣಿಜ್ಯ ಮತ್ತು ಹೂಡಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಹತ್ತು ಮಹತ್ವದ ಒಪ್ಪಂದಗಳಿಗೆ ಅಂಕಿತ ಹಾಕಲಾಗಿದೆ. ಹೊಸ ಕ್ಷೇತ್ರಗಳಲ್ಲಿ ಸಹಕಾರ ಏರ್ಪಟ್ಟಿರುವುದು ವಿಶೇಷ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ 85 ಬಿಲಿಯನ್ ಡಾಲರ್​ಗಳಿಗೆ ತಲುಪಿದ್ದು, ಭಾರತದಲ್ಲಿ ಹೆಚ್ಚು ಹೂಡಿಕೆ ಮಾಡಿದ ರಾಷ್ಟ್ರಗಳ ಪೈಕಿ ಯುಎಇ ಈಗ ನಾಲ್ಕನೇ ಸ್ಥಾನದಲ್ಲಿದೆ. ಹಸಿರು ಇಂಧನಕ್ಕೆ ಉತ್ತೇಜನ ನೀಡಲು ಉಭಯ ರಾಷ್ಟ್ರಗಳು ಸಮ್ಮತಿಸಿವೆ.

ಚೀನಾದ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್ (ಬಿಆರ್​ಐ) ಯೋಜನೆಗೆ ಪರೋಕ್ಷವಾಗಿ ಸೆಡ್ಡು ಹೊಡೆಯುವ ದೃಷ್ಟಿಯಿಂದಲೂ ಯೋಜನೆ ರೂಪಿಸಲಾಗಿದೆ. ಐಎಂಇಸಿ ಅಂದರೆ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ನಿರ್ವಿುಸುವ ಬಗ್ಗೆ ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಅಧಿಕೃತ ಘೋಷಣೆ ಮಾಡಲಾಗಿತ್ತು. ಈ ಕಾರಿಡಾರ್​ನ ಸ್ವರೂಪ ಹಾಗೂ ಭವಿಷ್ಯದ ಕಾರ್ಯಸೂಚಿಗಳ ಬಗ್ಗೆ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದು, ಪೂರೈಕೆ ಜಾಲವನ್ನು ಬಲಗೊಳಿಸಲು, ಆರ್ಥಿಕ ಚಟುವಟಿಕೆಗಳನ್ನು ಈ ದೇಶಗಳಲ್ಲಿ ಹೆಚ್ಚಿಸಲು ಪ್ರಸಕ್ತ ಕಾರಿಡಾರ್ ನೆರವಾಗಲಿದೆ. ಭಾರತ, ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಇಸ್ರೇಲ್ ಮತ್ತು ಯುರೋಪ್​ನ್ನು ಈ ಕಾರಿಡಾರ್ ಒಳಗೊಳ್ಳಲಿದೆ. ಹೂಡಿಕೆಯಲ್ಲಿ ಸಹಕಾರ ಮುಂದುವರಿಸುವ ನಿಟ್ಟಿನಲ್ಲಿ ಮತ್ತು ಡಿಜಿಟಲ್ ಮೂಲಸೌಕರ್ಯ ಹೆಚ್ಚಿಸುವ ಬಗ್ಗೆ ಉಭಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ.

ಜಾಗತಿಕವಾಗಿ ಭಾರತ ಹೊಸ ಸ್ನೇಹಿತರನ್ನು ಸಂಪಾದಿಸುತ್ತಿರುವುದು ಮತ್ತು ಆ ಸ್ನೇಹವನ್ನು ಬಲಗೊಳಿಸುತ್ತಿರುವುದು ರಾಜತಾಂತ್ರಿಕವಾಗಿ ಮಹತ್ವದ ಮುನ್ನಡೆಯೇ ಸರಿ. ಭಾರತದ ಬಗ್ಗೆ ಸಕಾರಾತ್ಮಕ ಮನೋಭಾವ, ಸಹಕಾರದ ಆಶಯವನ್ನು ಹೊಂದಿರುವ ಯುಎಇ ಕೂಡ ದ್ವಿಪಕ್ಷೀಯ ಸಂಬಂಧಗಳನ್ನು ಶಕ್ತಿಯುತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಒಟ್ಟಾರೆ, ಈ ಭೇಟಿಯಿಂದ ಭಾರತಕ್ಕೆ ಇಂಧನ, ಹೂಡಿಕೆ ಸೇರಿ ಹಲವು ರಂಗಗಳಲ್ಲಿ ಪ್ರಯೋಜನವಾಗಲಿದೆ. ಅಬುಧಾಬಿಯಲ್ಲಿ ಹಿಂದು ಮಂದಿರ ಉದ್ಘಾಟನೆಗೊಳ್ಳುವ ಮೂಲಕ ಸಾಂಸ್ಕೃತಿಕ ವಿನಿಮಯವು ಹೊಸ ಸ್ವರೂಪ ಪಡೆದುಕೊಂಡಿರುವುದು ಉತ್ತಮ ಬೆಳವಣಿಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net