

ಸಾಗರ: ತಾಲೂಕಿನ ಭಾರಂಗಿ ಹೋಬಳಿಯ ಉರುಳುಗಲ್ಲು, ಕಾನೂರು ಮತ್ತು ಮೇಘಾನೆ ಗ್ರಾಮಸ್ಥರನ್ನು ಪುನರ್ವಸತಿ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಶಾಸಕ ಗೋಪಾಲಕೃಷ್ಣ ಬೇಳೂರು ಅರಣ್ಯ ಸಚಿವರಿಗೆ ಬರೆದಿರುವ ಪತ್ರ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಸಿ.ಲಕ್ಷ್ಮೀನಾರಾಯಣ ಹೇಳಿದರು.
ಸ್ಥಳಾಂತರ ಪ್ರಕ್ರಿಯೆಗೆ ನಮ್ಮ ವಿರೋಧವಿದೆ. ನಮ್ಮ ಭೂಮಿ ನಮ್ಮ ಹಕ್ಕು ಘೋಷವಾಕ್ಯದಡಿ ಎಲ್ಲ ಹಂತದ ಪ್ರತಿಭಟನೆಗೂ ನಾವು ಸಿದ್ಧರಿದ್ದೇವೆ. ಶಾಸಕರು ಯಾವುದೋ ಸ್ವಯಂ ಸೇವಾ ಸಂಸ್ಥೆ, ಸರ್ಕಾರಿ ಅಧಿಕಾರಿಗಳ ಲಾಬಿಗೆ ಮಣಿದಂತೆ ಕಾಣುತ್ತಿದೆ. ಸ್ಥಳೀಯ ನಿವಾಸಿಗಳ ಅಭಿಪ್ರಾಯವನ್ನೂ ಕೇಳದೆ ಅವರನ್ನು ಒಕ್ಕಲೆಬ್ಬಿಸಲು ಪತ್ರ ಬರೆದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿಂಗಳೀಕ ಅರಣ್ಯ ಹೆಸರಿನಲ್ಲಿ ಹಂತಹಂತವಾಗಿ ಒಂದೊಂದೇ ಗ್ರಾಮಗಳನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಯಾವ ಕಾರಣಕ್ಕೂ ಗ್ರಾಮಗಳನ್ನು ಒಕ್ಕಲೆಬ್ಬಿಸಲು ಬಿಡಲ್ಲ. ಒಂದೊಮ್ಮೆ ಪ್ರಯತ್ನಕ್ಕೆ ಕೈಹಾಕಿದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಗ್ರಾಮಸ್ಥ ನಾಗರಾಜ ಸಾಲ್ಕೋಡ್ ಮಾತನಾಡಿ, ರಾಜ್ಯಕ್ಕೆ ವಿದ್ಯುತ್ ನೀಡಲು ಎರಡು ಬಾರಿ ನಾವು ಆಸ್ತಿಪಾಸ್ತಿಯನ್ನು ಕಳೆದುಕೊಂಡಿದ್ದೇವೆ. ನಮ್ಮನ್ನು ರಕ್ಷಣೆ ಮಾಡಬೇಕಾದವರೇ ಒಕ್ಕಲೆಬ್ಬಿಸುವಂತೆ ಪತ್ರ ಬರೆದಿರುವುದು ನಮಗೆ ಆತಂಕ ತಂದಿದೆ. ನಾವು ಗ್ರಾಮಗಳಿಗೆ ಮೂಲ ಸೌಲಭ್ಯ ನೀಡಿ ಎಂದು ಕೇಳಿದ್ದೇವೆಯೇ ವಿನಃ ಬೇರೆಡೆ ಸ್ಥಳಾಂತರಗೊಳ್ಳುತ್ತೇವೆ ಎಂದು ಹೇಳಿಲ್ಲ. ಹಲವು ವರ್ಷಗಳಿಂದ ನಾವು ನಾಗರಿಕ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದೇವೆ. ರಸ್ತೆ, ವಿದ್ಯುತ್ ಇನ್ನಿತರೆ ಸೌಲಭ್ಯ ಕೊಡುವ ಬದಲು ಒಕ್ಕಲೆಬ್ಬಿಸಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.
ಲಕ್ಷ್ಮಣ್, ಪ್ರಸನ್ನ ಕೊಳಚಗಾರು, ಮಹೇಶ್ ಮೆಗ್ಗಾನೆ, ದಿನೇಶ್ ಹಾರೋಡಿ, ಓಮೇಂದ್ರ ಜೈನ್, ರಾಮಚಂದ್ರ ಇತರರಿದ್ದರು.