ಎಪಿಎಲ್ ಕಾರ್ಡ್ ರದ್ದು! ಆಹಾರ ಇಲಾಖೆಯ ಕ್ರಮದ ವಿರುದ್ಧ ಕಾರ್ಡ್​ದಾರರ ಆಕ್ರೋಶ

ವಿಜಯವಾಣಿ (4)
Published on

ಆಯುಷ್ಮಾನ್ ವಿಮೆ, ಇಡಬ್ಲ್ಯುಎಸ್ ಮೀಸಲಾತಿ ಸೇವೆ ಅಲಭ್ಯ

| ಹರೀಶ್ ಬೇಲೂರು, ಬೆಂಗಳೂರು

ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್​ಗಳನ್ನು ರದ್ದುಪಡಿಸಿದ ಬೆನ್ನಲ್ಲೇ ಆಹಾರ ಇಲಾಖೆ ಎಪಿಎಲ್ ಕಾರ್ಡ್​ದಾರರಿಗೂ ಬಿಸಿ ಮುಟ್ಟಿಸಿದೆ. ರೇಷನ್ ಕಾರ್ಡ್​ಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡದ ಕಾರಣಕ್ಕೆ ಲಕ್ಷಾಂತರ ಎಪಿಎಲ್ ಕಾರ್ಡ್​ಗಳನ್ನು ರದ್ದುಪಡಿಸಿದೆ. ಹಲವು ತಿಂಗಳಿಂದ ಎಪಿಎಲ್ ಕಾರ್ಡ್​ಗೆ ನೀಡಲಾಗುತ್ತಿದ್ದ ರೇಷನ್ ಹಂಚಿಕೆಯನ್ನು ನಿಲ್ಲಿಸಲಾಗಿದೆ. ಕಾರ್ಡ್ ರದ್ದತಿ ಕ್ರಮ ಕುರಿತು ಸರ್ಕಾರ ಹಾಗೂ ಇಲಾಖೆ ವಿರುದ್ಧ ಎಪಿಎಲ್ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೊಮ್ಮೆ ಇಲಾಖೆಯಿಂದ ಬೋಗಸ್ ಕಾರ್ಡ್ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯ ನಡೆದಿತ್ತು.

ನಂತರ, ರೇಷನ್ ಕಾರ್ಡ್​ಗೆ ಆಧಾರ್ ಜೋಡಣೆ ನಿಯಮ ತರಲಾಗಿತ್ತು. ಶೇ.100 ಆಧಾರ್ ಜೋಡಣೆಯಾಗಿತ್ತು. ಈ ವೇಳೆ ಲಕ್ಷಾಂತರ ಬೋಗಸ್ ಕಾರ್ಡ್ ಪತ್ತೆಯಾಗಿತ್ತು. 2019ರಿಂದ 2022ರವರೆಗೆ ರೇಷನ್ ಕಾರ್ಡ್​ಗೆ ಮತ್ತೊಮ್ಮೆ ಇ-ಕೆವೈಸಿ ಪ್ರಕ್ರಿಯೆ ಮಾಡಿಸುವಂತೆ ನಿಯಮ ಜಾರಿಗೆ ತರಲಾಗಿತ್ತು. ಈ ವೇಳೆ ಶೇ.80ರಷ್ಟು ಎಪಿಎಲ್ ಫಲಾನುಭವಿಗಳು ಇ-ಕೆವೈಸಿ ಮಾಡಿಸಿಕೊಂಡಿದ್ದರು. ಆದರೆ, ಶೇ.20ರಷ್ಟು ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ಸದಸ್ಯರು ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಂಡಿರಲಿಲ್ಲ. ಹಾಗಾಗಿ, ಅಂಥವರ ಕಾರ್ಡ್​ಗಳನ್ನು ಡಿಲೀಟ್ ಮಾಡಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ 25,62,562 ಎಪಿಎಲ್ ಕಾರ್ಡ್​ಗಳಿದ್ದು, 87,86,886 ಸದಸ್ಯರಿದ್ದಾರೆ. ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ’ಯಡಿ ಎಪಿಎಲ್ ಹೊಂದಿರುವ ಪ್ರತಿ ಕಾರ್ಡ್​ಗೆ ಕೆಜಿ ಅಕ್ಕಿಗೆ 15 ರೂ.ನಂತೆ 10 ಕೆಜಿ ಅಕ್ಕಿ ನೀಡಲಾಗುತ್ತದೆ.

ಏನೆಲ್ಲಾ ಸೇವೆ ವಂಚಿತ?

  • ಎಪಿಎಲ್ ರದ್ದತಿಯಿಂದ ಗೃಹಲಕ್ಷ್ಮೀ ಯೋಜನೆಯಡಿ ಪಡೆಯುತ್ತಿದ್ದ ಹಣ ಸ್ಥಗಿತ
  • ಕುಟುಂಬದ ಐಡಿ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾಗಲ್ಲ
  • ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಆಗಲ್ಲ
  • ವಿವಿಧ ಸರ್ಕಾರಿ ಸೌಲಭ್ಯಗಳು ಸಿಗಲ್ಲ
  • ‘ಆಯುಷ್ಮಾನ್ ಭಾರತ’ ಯೋಜನೆ ಲಾಭ ಪಡೆಯಲು ಸಾಧ್ಯವಾಗಲ್ಲ
  • ರಿಯಾಯಿತಿ ದರದಲ್ಲಿ ಅಕ್ಕಿ ಸಿಗಲ್ಲ
  • ಮುಂದಿನ ದಿನಗಳಲ್ಲಿ ಸರ್ಕಾರಿ ಯೋಜನೆಗಳಿಗೆ ಎಪಿಎಲ್ ಕಡ್ಡಾಯ ಮಾಡಿದರೆ ಆ ಸೌಲಭ್ಯಗಳು ಸಿಗಲ್ಲ
  • ಕೇಂದ್ರ ಸರ್ಕಾರದಿಂದ ನೀಡುವ ಮೀಸಲಾತಿ ದೊರೆಯಲ್ಲ

22 ಲಕ್ಷ ಕಾರ್ಡ್ ರದ್ದಾಗಿತ್ತು

ಕುಟುಂಬ ತಂತ್ರಾಂಶದ ಮೊರೆ ಹೋಗಿದ್ದ ಇಲಾಖೆ, 22,62,413 ಅನರ್ಹ ಬಿಪಿಎಲ್, ಅಂತ್ಯೋದಯ ಕಾರ್ಡ್ ರದ್ದುಪಡಿಸಿತ್ತು. ಇದರಲ್ಲಿ 10,97,621 ಅನರ್ಹ ಬಿಪಿಎಲ್, ಅಂತ್ಯೋದಯ, 1,06,152 ಕಾರ್ಡ್​ದಾರರು ಆದಾಯ ತೆರಿಗೆ ಪಾವತಿದಾರರು, 10,54,368 ಕಾರ್ಡ್​ಗಳು 1.2 ಲಕ್ಷಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರು ಹಾಗೂ 4,272 ಚೀಟಿ ಕೆಜಿಐಡಿ, ಎಚ್​ಆರ್​ಎಂಎಸ್​ನಲ್ಲಿ ಜೋಡಣೆಯಾಗಿರುವವರನ್ನು ಡಿಲೀಟ್ ಮಾಡಲಾಯಿತು. ಈ ಮೇಲಿನವು ಸರ್ಕಾರ ನಿಗದಿಪಡಿಸಿದ್ದ ಮಾನದಂಡ ಉಲ್ಲಂಘಿಸಿ ಪಡೆದ ಪಡಿತರ ಚೀಟಿಗಳಾಗಿದ್ದವು.

ಆದರೆ, ಒಟ್ಟು 25 ಲಕ್ಷ ಎಪಿಎಲ್ ಕಾರ್ಡ್​ಗಳ ಪೈಕಿ ಶೇ.80 ಕಾರ್ಡ್​ದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ಕೊಟ್ಟು ರೇಷನ್ ಪಡೆಯಲು ನಿರಾಸಕ್ತಿ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೇಷನ್ ಪಡೆಯದ ಕಾರ್ಡ್​ಗಳಿಗೆ ರೇಷನ್ ನಿಲ್ಲಿಸಲು ಆಹಾರ ಇಲಾಖೆ ಹಿಂದೆಯೇ ನಿರ್ಧಾರ ತೆಗೆದುಕೊಂಡಿದೆ. ರೇಷನ್ ಪಡೆಯದ ಕಾರ್ಡ್​ಗಳನ್ನು ಡಿಲೀಟ್ ಮಾಡಲು ಇಲಾಖೆ ಮುಂದಾಗಿದೆ. ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ

ಇಲಾಖೆ ಎಪಿಎಲ್ ನೀಡುತ್ತಿತ್ತು. ಹೊಸ ಎಪಿಎಲ್ ನೀಡುವುದನ್ನು ಇಲಾಖೆ ನಿಲ್ಲಿಸಿದೆ. ಇನ್ನು ಮುಂದೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಗುರುತಿನ ಚೀಟಿಗಾಗಿಯೋ ಅಥವಾ ರೇಷನ್​ಗಾಗಿಯೋ ಎಂಬುದನ್ನೂ ಪ್ರತ್ಯೇಕವಾಗಿ ನಮೂದಿಸಿ ಎಪಿಎಲ್ ಮಂಜೂರು ಮಾಡುವ ಕುರಿತು ಇಲಾಖೆ ಆಲೋಚಿಸಿದ್ದು, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಅಲ್ಲದೆ, ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊರತುಪಡಿಸಿ ಎಪಿಎಲ್ ಕಾರ್ಡ್​ಗಳಿಗೆ ಹಣ ನೀಡುತ್ತಿಲ್ಲ. ಎಪಿಎಲ್ ರದ್ದತಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ಉಳಿತಾಯವಾಗಿದೆ.

ಆರ್ಥಿಕ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್) ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆ ಮೀಸಲಾತಿ ಸೌಲಭ್ಯ ಪಡೆಯುವುದಕ್ಕೆ ಎಪಿಎಲ್ ಕಾರ್ಡ್ ಕೇಳುತ್ತಾರೆ. ಕಾರ್ಡ್ ರದ್ದತಿಯಿಂದ ನಾವು ಮೀಸಲಾತಿಯಿಂದ ವಂಚಿತರಾಗಿದ್ದೇವೆ. ಇದಲ್ಲದೆ, ಇತರೆ ಸರ್ಕಾರಿ ಸೌಲಭ್ಯಗಳಿಂದಲೂ ಹೊರಗುಳಿಯುತ್ತೇವೆ. | ನಾಗರಾಜ ಜಿ.ಭಟ್, ನ್ಯಾಯವಾದಿ, ಎಪಿಎಲ್ ಕಾರ್ಡ್​ದಾರ

ಆರೋಗ್ಯ ಸೇವೆ ವಂಚಿತ

70 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ 5 ಲಕ್ಷ ರೂ.ವರೆಗೆ ಚಿಕಿತ್ಸೆ ನೀಡುವ ‘ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ’(ಎಬಿ-ಪಿಎಂಜೆಎವೈ)ಗೆ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ನೀಡಲಾಗುವ ದಾಖಲೆಗಳ ಪೈಕಿ ಎಪಿಎಲ್ ಕಡ್ಡಾಯ ಮಾಡಲಾಗಿದೆ. ಎಪಿಎಲ್ ರದ್ದತಿಯಿಂದ ವಯಸ್ಸಾದ ನಾಗರಿಕರು ಯೋಜನೆಯಿಂದ ವಂಚಿತರಾಗಿ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಲಕ್ಷಾಂತರ ರೂಪಾಯಿ ವ್ಯಯಿಸಿ ಚಿಕಿತ್ಸೆ ಪಡೆಯಲು ತೊಂದರೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net