

ಬೆಂಗಳೂರು: 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಎಸ್ಸೆಸ್ಸೆಲ್ಸಿ ರಿಸಲ್ಟ್ ನೋಡಲು ವೆಬ್‌ಸೈಟ್ ಓಪನ್ ಆಗುತ್ತಿಲ್ಲ.
ಎಸ್ಸೆಸ್ಸೆಲ್ಸಿ ಬೋರ್ಡ್‌ಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಗೆ ಶಿಕ್ಷಣ ಇಲಾಖೆಯಿಂದ ಆಯಾ ಮಕ್ಕಳ ಫಲಿತಾಂಶದ ಮೆಸೇಜ್ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದುವರೆಗೆ ಮೆಸೇಜ್ ಕೂಡ ಬಾರದೇ, ವೆಬ್‌ಸೈಟ್ ಕೂಡ ಓಪನ್ ಆಗದೇ ಇರುವ ಕಾರಣ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಟೆನ್ಷನ್ ಇನ್ನಷ್ಟು ಹೆಚ್ಚಾಗಿದೆ.
ಇದಾಗಲೇ ತಮಗೆ ಎಷ್ಟು ಅಂಕ ಬರಬಹುದು? ಎಂದು ವಿದ್ಯಾರ್ಥಿಗಳು ಊಹಿಸಿದ್ದರೂ ಇಂಟರ್ನಲ್ ಮಾರ್ಕ್ಸ್‌ಗಳನ್ನು ಶಾಲೆಗಳು ಕೊಡಬೇಕಿರುವ ಹಿನ್ನೆಲೆಯಲ್ಲಿ ತಮಗೆ ಎಷ್ಟು ಅಂಕ ಬಂದಿದೆ ಎಂಬ ಬಗ್ಗೆ ತಿಳಿಯುವ ಕುತೂಹಲದಲ್ಲಿ ವಿದ್ಯಾರ್ಥಿಗಳು ಇದ್ದಾರೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್ ಅನ್ನು ಲಕ್ಷಾಂತರ ಮಂದಿ ಒಮ್ಮೆಲೆ ಕ್ಲಿಕ್ ಮಾಡುತ್ತಿರುವ ಪರಿಣಾಮ ಹ್ಯಾಂಗ್ ಆಗಿದ್ದು, ಫಲಿತಾಂಶ ನೋಡಲು ಚಾತಕಪಕ್ಷಿಯಂತೆ ಕಾಯುತ್ತಿರುವ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಆತಂಕ ಮೂಡಿಸಿದೆ. ಪ್ರತಿ ವರ್ಷವೂ ಇದೇ ಸಮಸ್ಯೆ ಎದುರಾಗುತ್ತಿದೆ.