

ವಿಜಯಪುರ: 2 ತಿಂಗಳ ಹಿಂದೆ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ಥಳೀಯರು ಮತ್ತು ಕನ್ನಡಿಗರ ನಡುವೆ ಗಲಾಟೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಸುಕ್ಷೇತ್ರ ಶ್ರೀಶೈಲದಲ್ಲಿ ಕರ್ನಾಟಕದ ಸರ್ಕಾರಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ದಾಳಿ ನಡೆಸಲಾಗಿದೆ. ಜೂ.2ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ ಡಿಪೋದ ಬಸ್ ಚಾಲಕ ಬಸವರಾಜ ಬಿರಾದಾರ ಮೇಲೆ ಹಲ್ಲೆ ನಡೆದಿದೆ. ಬಸ್ನ ಕಿಟಕಿ ಗಾಜು ಹೊಡೆದು ಚಾಲಕ ಹಾಗೂ ನಿರ್ವಾಹಕನ ಮೇಲೆ ದಾಳಿ ನಡೆಸಲಾಗಿದೆ. ಶ್ರೀಶೈಲ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸಿ ಊಟ ಮಾಡಿ ಕಟ್ಟೆಯ ಮೇಲೆ ಮಲಗಿದ್ದಾಗ ಏಕಾಏಕಿ ಬಂದ ಪುಂಡರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ಕನ್ನಡಿಗರ ಬಗ್ಗೆ ಆಶ್ಲೀಲ ಪದ ಬಳಸಿ 10-12 ಜನರಿರುವ ತಂಡವೊಂದು ಹಲ್ಲೆ ಮಾಡಿದೆ.
ಚಾಲಕನ ಮುಖ ಹಾಗೂ ಕಾಲಿನ ಭಾಗಕ್ಕೆ ಹೊಡೆಯಲಾಗಿದೆ. ತೀವ್ರ ರಕ್ತ ಸ್ರಾವವಾಗಿ ಚಾಲಕ ಬಸವರಾಜ ಚೀರಾಡುತ್ತಿದ್ದಂತೆ ಇತರ ಚಾಲಕರು ಹಾಗೂ ನಿರ್ವಾಹಕರು ಓಡಿ ಬರುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆಂದು ತಿಳಿದು ಬಂದಿದೆ.
ಜಾತ್ರೆಯಲ್ಲೂ ನಡೆದಿತ್ತು ಹಲ್ಲೆ: ಕಳೆದ ಯುಗಾದಿ ಸಂದರ್ಭದಲ್ಲಿ ನಡೆದ ಜಾತ್ರೆ ವೇಳೆಯೂ ಕನ್ನಡಿಗರ ಮೇಲೆ ಹಲ್ಲೆಯಾಗಿತ್ತು. ಮಾರ್ಚ್ 31 ರಂದು ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾಗಿ ಕರ್ನಾಟಕದ ವಾಹನಗಳ ಗಾಜು ಒಡೆದು ಹಾಕಲಾಗಿತ್ತು. ಮತ್ತೆ ಕನ್ನಡಿಗರ ಮೇಲೆ ಹಲ್ಲೆಯಾಗಿದೆ. ಮಾರ್ಚ್ 31 ರಂದು ನೀರಿನ ಬಅಟಲಿ ವಿಚಾರವಾಗಿ ಬಾಗಲಕೋಟೆ ಮೂಲದ ಶ್ರೀಶೈಲ್ ವಾರಿಮಠ ಎಂಬ ಯುವಕನ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆ ಮಾಸುವ ಮುಂಚೆಯೇ ಮತ್ತೊಂದು ಮಾರಣಾಂತಿಕ ಹಲ್ಲೆಯ ಘಟನೆ ನಡೆದಿರುವುದು ಶ್ರೀಶೈಲದಲ್ಲಿ ಕನ್ನಡಿಗರಿಗೆ ಸುರಕ್ಷತೆ ಬಗ್ಗೆ ಸಂಶಯ ಮೂಡಿಸುತ್ತಿದೆ. ಇದೊಂದು ಉದ್ದೇಶ ಪೂರ್ವಕವಾಗಿ ನಡೆದಿರೋ ಹಲ್ಲೆ ಎನ್ನಲಾಗುತ್ತಿದೆ.