ಶ್ರೀಶೈಲದಲ್ಲಿ ಕರ್ನಾಟಕದ ಭಕ್ತರು ಸುರಕ್ಷಿತವಾಗಿದ್ದಾರೆ, ಭಯ ಪಡಬೇಡಿ: ಶ್ರೀಶೈಲ ಜಗದ್ಗುರುಗಳು

Srisaila Jagadguru
Published on

ಬೆಂಗಳೂರು: ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಕನ್ನಡಿಗರು ಸುರಕ್ಷಿತವಾಗಿದ್ದಾರೆ, ಭಯಪಡುವ ಅಗತ್ಯವಿಲ್ಲ. ನಿನ್ನೆ ರಾತ್ರಿ ನಡೆದ ಗಲಭೆಯಲ್ಲಿ ಗಾಯಗೊಂಡ ಕರ್ನಾಟಕದ ವ್ಯಕ್ತಿ ಬದುಕಿದ್ದಾರೆ, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ತಿಳಿಸಿದ್ದಾರೆ.

ಬುಧವಾರ ರಾತ್ರಿ ಶ್ರೀಶೈಲ ಕ್ಷೇತ್ರದಲ್ಲಿ ಕರ್ನಾಟಕದಿಂದ ಒಬ್ಬ ಭಕ್ತ ಹಾಗೂ ಸ್ಥಳೀಯ ಹೋಟೆಲ್​ವೊಂದರ ವ್ಯಕ್ತಿ ನಡುವೆ ಶುರುವಾದ ಜಗಳ 2 ಸಮುದಾಯದಗಳವರೆಗೆ ಹಬ್ಬಿ ಗಲಾಟೆ ಆಗಿದೆ. ಕರ್ನಾಟಕದ ಭಕ್ತನ ಮೇಲೆ ಹೋಟೆಲ್​ನಲ್ಲಿದ್ದ ವ್ಯಕ್ತಿ ಹಲ್ಲೆ ಮಾಡಿದ್ದರಿಂದ ಗಾಯಗೊಂಡಿದ್ದಾನೆ. ಕರ್ನಾಟಕದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಹಲ್ಲೆಗೊಳಗಾದ ವ್ಯಕ್ತಿ ಸತ್ತಿದ್ದಾನೆ ಎಂಬ ಸುದ್ದಿ ಹಬ್ಬಿ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಕೂಡಲೇ ನಾವು ಸ್ಥಳಕ್ಕೆ ಹೋಗಿ ಶಾಂತಿ ಕಾಪಾಡುವಂತೆ ತಿಳಿಹೇಳಿ ಪರಿಸ್ಥಿತಿ ನಿಭಾಯಿಸಿದ್ದೇವೆ ಎಂದು ವಿಡಿಯೋ ಸಂದೇಶದ ಮೂಲಕ ಶ್ರೀಶೈಲದ ಜಗದ್ಗುರುಗಳು ವಿವರಿಸಿದ್ದಾರೆ.

ಕರ್ನಾಟಕದ ಭಕ್ತರ ಮೇಲೆ ಹಲ್ಲೆ ನಡೆದಿದೆ, ಕರ್ನಾಟಕದ ಭಕ್ತರು ಸುರಕ್ಷಿತವಾಗಿಲ್ಲ ಎಂಬ ಸುದ್ದಿ ಕರ್ನಾಟಕದಲ್ಲಿ ಹಬ್ಬಿತ್ತು. ಆದರೆ ಇದೆಲ್ಲವೂ ಸುಳ್ಳು. ಕರ್ನಾಟಕದ ಭಕ್ತರು ಇಲ್ಲಿ ಸುರಕ್ಷಿತವಾಗಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯ ಆರೋಗ್ಯವನ್ನು ಆಸ್ಪತ್ರೆಗೆ ಹೋಗಿ ವಿಚಾರಿಸಿದ್ದೇವೆ. ಉತ್ತಮ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದೆ. ಯಾರೂ ಆತಂಕ ಪಡಬೇಡಿ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net