ಅಧ್ಯಾತ್ಮ ಪ್ರದರ್ಶನ-ನಿದರ್ಶನ

Ramakrishna paramahamsa
Published on
ಪರಮಹಂಸ ನುಡಿದೀಪ
ಈ ಪ್ರಪಂಚದಲ್ಲಿ ಅದರಲ್ಲಿಯೂ ಆಧ್ಯಾತ್ಮಿಕ ಜಗತ್ತಿನಲ್ಲಂತೂ ಇತ್ತೀಚೆಗೆ ನಾನಾ ರೀತಿಯ ಪ್ರದರ್ಶನಕ್ಕೆ ಮೀಸಲಾಗಿರುವ ವಿಚಾರಧಾರೆಗಳನ್ನು ಪ್ರತಿಕ್ಷಣ ಕಾಣುತ್ತೇವೆ. ಸಾಮಾನ್ಯನಿಂದ ಹಿಡಿದು ಬುದ್ದಿಜೀವಿಗಳವರೆಗೆ ಮಾತಿಗೆ ಮರುಳಾಗಿ ಇದೇ ಅಧ್ಯಾತ್ಮ ವಿದ್ಯೆ ಎಂದು ಭಾವಿಸಿ ಚುಕ್ಕಾಣಿಯಿಲ್ಲದ ನಾವೆಯಂತೆ ಈ ಭವ ಸಮುದ್ರದಲ್ಲಿ ಸಾಗುತ್ತಿರುವುದನ್ನು ಕಾಣಬಹುದಾಗಿದೆ. ಅಧ್ಯಾತ್ಮ ಗುರಿಯತ್ತ ಸಾಗುವುದೇ ನಿಜವಾದ ಅರ್ಥದಲ್ಲಿ ಜೀವನ ಎನ್ನಬಹುದು. ಸನಾತನ ಧರ್ಮದ ಮೂಲವೇ ಸಾಮಾನ್ಯ ಮಾನವ ದೈವತ್ವದೆಡೆಗೆ ಪಥಿಸುವುದು. ಆದರೆ ಮನುಷ್ಯನ ಗುರಿ ಬದಲಾಗುತ್ತಾ ಬರುತ್ತಿದೆ.

ಹಿಂದಿನ ಕಾಲದಲ್ಲಿ ಅಧ್ಯಾತ್ಮ ಎಂದರೆ ಪ್ರತಿಯೊಬ್ಬ ಜೀವಿಗೂ ಸ್ವಾತ್ಮಾನುಸಂಧಾನವನ್ನು ಪಡೆಯುವ ಪ್ರಯತ್ನವಾಗಿ ಭಕ್ತಿ, ಯೋಗ, ಕರ್ಮ, ಜ್ಞಾನ ಮಾರ್ಗಗಳಲ್ಲಿ ಪಥಿಸುತ್ತಾ ತನ್ನ ಗುರಿಯನ್ನು ಅರಿತು ಅದಕ್ಕನುಗುಣವಾಗಿ ಜೀವನಮಾರ್ಗವನ್ನು ಆಯ್ದುಕೊಂಡು ಜೀವಿಸುವುದೇ ಧರ್ಮ ಎಂದೆನಿಸಿಕೊಂಡಿತ್ತು. ವಿಜ್ಞಾನದ ಅನ್ವೇಷಣೆಗಳು ಮುಂದುವರಿದಂತೆ ಅಧ್ಯಾತ್ಮ ದಿನೇ ದಿನೇ ನಿಜವಾದ ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಅಂತಃಶಕ್ತಿಯ ಅರಿವು ಕ್ರಮೇಣ ವ್ಯಕ್ತಿ ಪ್ರಭಾವ, ಪೂಜೆ, ಪರಿಣಾಮಗಳಿಗೆ ಹೆಚ್ಚಿನ ಗಮನ ನೀಡುವಂತಾಗಿಸುವ ಪರಿಸ್ಥಿತಿ ನಿರ್ವಣವಾಗಿದೆ. ಮುಖ್ಯವಾಗಿ ನಿಜವಾದ ಅರ್ಥದ ಅಧ್ಯಾತ್ಮಿಕತೆ

ಎಂಬುದೇ ತನ್ನ ಇರುವಿಕೆಯನ್ನೇ ಕಳೆದುಕೊಂಡಂತಿದೆ. ಉಪನಿಷತ್ ವಾಕ್ಯಗಳೇ ಜೀವನದ ಮೂಲವಾಕ್ಯಗಳಾಗಿದ್ದು ಅಧ್ಯಾತ್ಮ ಜೀವನ ನಡೆಸುವವರಿಗೆ ಈ ವೇದೋಪನಿಷತ್ತುಗಳು ತಾಯಿಯ ರೂಪದಲ್ಲಿ ಮಾರ್ಗದರ್ಶನವನ್ನಿತ್ತು ಅಧ್ಯಾತ್ಮ ಪ್ರಗತಿಗೆ ಸಹಕಾರವಾಗುವಂತಹ ಸ್ಥಿತಿಯನ್ನು ನಿರ್ವಣವಾಗುವಂತೆ ಸ್ಪಂದಿಸುತ್ತಿತ್ತು. ದುರದೃಷ್ಟವಶಾತ್ ಈಗ ಈ ಮಹಾನ್ ತತ್ತ್ವಗಳ ಸನಿಹಕ್ಕೆ ಇರಲಿ, ವಿಚಾರಕ್ಕೆ ಬರುವುದೂ ದುಸ್ತರವಾಗಿದೆ. ಈ ಭಯಾನಕ ಸ್ಥಿತಿಯಲ್ಲಿ ಭಗವದ್ ಶಕ್ತಿಯನ್ನು ಸಾಕಾರ ರೂಪದಲ್ಲಿಯೋ ನಿರಾಕಾರ ರೂಪದಲ್ಲಿಯೋ ದರ್ಶನ ಪಡೆಯುವ ವಿಚಾರಗಳೆಲ್ಲವೂ ಮಾಯವಾಗಿವೆ.

ಭಗವಾನ್ ರಾಮಕೃಷ್ಣ ಪರಮಹಂಸರು ಈ ಯುಗಕ್ಕೆ ಸರಿಯಾದ ಖಚಿತವಾದ, ಸಂದೇಹವಿಲ್ಲದ ರೀತಿಯಲ್ಲಿ ಸಕಲ ಜೀವರಾಶಿಯೂ ಅರ್ಥೈಸಿಕೊಳ್ಳುವಂತಹ ಅಧ್ಯಾತ್ಮ ವಿಚಾರಗಳನ್ನು ಭೋಧಿಸುತ್ತಿದ್ದ ಸನ್ನಿವೇಶಗಳನ್ನು ನಾವು ಕಾಣಬಹುದಾಗಿದೆ. ರಾಮಕೃಷ್ಣರ ಭಾಷೆಯಲ್ಲಿ ತಿಳಿಯುವುದಾದರೆ ಮನುಷ್ಯನ ಏಕೈಕ ಗುರಿ ಭಗವಂತನನ್ನು ಪಡೆಯುವುದು. ಅಧ್ಯಾತ್ಮ ಸಾಧಕ ಭಗವಂತನು ನಿರಾಕಾರ ಎಂದೇ ಅರಿಯಲಿ, ಸಾಕಾರ ಎಂದೇ ಭಜಿಸಲಿ, ಪ್ರಾರ್ಥಿಸಲಿ ಗುರಿ ಮಾತ್ರ ಒಂದೇ ಎಂದು ಸಾರಿ ಸಾರಿ ಬೋಧಿಸಿದವರು ರಾಮಕೃಷ್ಣರು. ಅದೊಂದು ದಿನ ಸಾಕಾರ-ನಿರಾಕಾರ ವಿಚಾರವಾಗಿ ಅವರು ಹೀಗೆ ನುಡಿಯುತ್ತಾರೆ: ಹೌದು, ಸಾಕಾರ ನಿರಾಕಾರ ಎರಡೂ ಸತ್ಯ. ಭಗವಂತ ಕೇವಲ ನಿರಾಕಾರ ಎಂಬುದು ಹೇಗೆ ಕಾಣುತ್ತದೆ ಗೊತ್ತೆ? ಇದು ಓಲಗ ಊದುವಾಗ ಏಳು ರಂದ್ರಗಳಿದ್ದರೂ ಒಬ್ಬ ಕೇವಲ ಪ್ಹೂ ಅಂತ ಧ್ವನಿ ಹೊರಡಿಸುತ್ತಾನಲ್ಲ ಹಾಗೆ, ಆದರೆ ಇನ್ನೊಬ್ಬನನ್ನು ನೋಡಿ, ಆತ ಎಷ್ಟೊಂದು ವಿಧದ ರಾಗ ರಾಗಿಣಿಗಳನ್ನು ನುಡಿಸುತ್ತಾನೆ! ಅದೇ ರೀತಿಯಾಗಿ ಸಾಕಾರವಾದಿಗಳು ಭಗವಂತನನ್ನು ಅನೇಕ ವಿಧಗಳಿಂದ ಪೂಜಿಸಿ ಆನಂದ ಪಡುತ್ತಾರೆ. ಶಾಂತ, ದಾಸ್ಯ, ಸಖ್ಯ, ವಾತ್ಸಲ್ಯ, ಮಧುರ ಹೀಗೆ ನಾನಾ ಭಾವಗಳಿಂದ! ಜ್ಞಾನ ಸೂರ್ಯನ ತಾಪದಿಂದ ಹಿಮಗಡ್ಡೆಯಂತಹ ಭಗವಂತನ ಸಾಕಾರ ರೂಪ ಕರಗಿ ಹೋಗುತ್ತದೆ. ಬ್ರಹ್ಮಜ್ಞಾನ ದೊರೆತ

ನಂತರ ಅಂದರೆ, ನಿರ್ವಿಕಲ್ಪ ಸಮಾಧಿ ದೊರೆತ ನಂತರ ನಿರಾಕಾರ ಬ್ರಹ್ಮನ ದರ್ಶನ. ಇದು ಪರಮಹಂಸರು ನಿಷ್ಠಾವಂತ ಸಾಧಕರಿಗೆ ಭೋಧಿಸುತ್ತಿದ್ದ ಪರಿ. ರಾಮಕೃಷ್ಣರಲ್ಲಿ ಶುದ್ಧ ಅಧ್ಯಾತ್ಮವನ್ನೇ ಕಾಣಬಹುದಾಗಿತ್ತು, ಅರಿಯಬಹುದಾಗಿತ್ತು ಮತ್ತು ಅದರ ಆನಂದ ಸಾಗರದಲ್ಲಿಯೇ ಮುಳುಗುವಂತಾಗುತ್ತಿತ್ತು ಎಂಬುದು ಭಗವಾನರ ಬಳಿ ಸಾರಿದ ಪ್ರತಿಯೊಬ್ಬ ಸಾಧಕನ, ಭಕ್ತನ ಮನದಾಳದ ನುಡಿ. ಇನ್ನು ನಿಜವಾದ ಅರ್ಥದಲ್ಲಿ ಅಧ್ಯಾತ್ಮ ಎಂದರೇನು ಎಂಬುದಕ್ಕೆ ನಿಖರವಾಗಿ ಪರಮಹಂಸರು ಹೇಳುತ್ತಿದ್ದರು. ತಮ್ಮ ಜೀವನದ ಸಾಧನಾ ಅನುಭವಗಳನ್ನೇ ನಿದರ್ಶನವಾಗಿಟ್ಟು ನುಡಿಯುತ್ತಿದ್ದರು. ಉದಾಹರಣೆಗೆ ಧ್ಯಾನ ಮಾಡುವುದು. ಧ್ಯಾನಕ್ಕೆ ಮನಸ್ಸನ್ನು ಹದಗೊಳಿಸಿಕೊಂಡು ಯಾವ ತರದಲ್ಲಿ ಧ್ಯಾನಮಗ್ನವಾಗಬೇಕೆಂದು ತಿಳಿಸುತ್ತಿದ್ದರು. ಒಮ್ಮೆ ‘ಭಗವಂತನೇ ಜೀವ ಜಗತ್ತು ಎಲ್ಲವೂ ಆಗಿದ್ದಾನೆ ಆದ್ದರಿಂದ ಧ್ಯಾನ ಮಾಡುವವನೂ ಭಗವಂತನೇ ಅಲ್ಲವೇ’ ಎಂಬ ಪ್ರಶ್ನೆಗೆ ರಾಮಕೃಷ್ಣರ ಉತ್ತರ ಹೀಗಿತ್ತು:

‘ಭಗವಂತ ಧ್ಯಾನ ಮಾಡಿಸದಿದ್ದರೆ ಧ್ಯಾನ ಮಾಡಲಾಗುವುದಿಲ್ಲ. ಆತ ಮಾಡಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಭಗವಂತನೇ ಸರ್ವಶಕ್ತ! ಅವನಿಂದಲೇ ಎಲ್ಲವೂ ಸಾಧ್ಯ, ಅವನಲ್ಲಿ ಸಂಪೂರ್ಣ ಶರಣಾಗತಿ ಹೊಂದಬೇಕು. ನಾನು ಎಂಬ ಅಹಂ ಭಾವನೆ ಕಿಂಚಿತ್ತು ಇದ್ದಾಗಲೂ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಸಂಪೂರ್ಣ ಶರಣಾಗತಿ ಹೊಂದಿದಾಗಲೇ ನಮ್ಮ ಮನಸ್ಸು ನಿಜವಾದ ಅರ್ಥದಲ್ಲಿ ಧ್ಯಾನ ಆರಂಭಿಸಬಹುದು’. ಹೀಗೆ ತಮ್ಮ ಅನುಭವಗಳನ್ನು ಆದರ್ಶವಾಗಿಸಿಕೊಂಡು ತಮ್ಮ ಬಳಿ ಬರುವವರಿಗೆ ಸಾಧನಾ ಪಥವನ್ನು ಅವರು ತೋರುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net