ಆದಿವಾಸಿಗಳ ನಡಿಗೆ ತಮ್ಮ ತಮ್ಮ ನೆಲೆಗಳ ಕಡೆಗೆ ವಿಶೇಷ ಕಾರ್ಯಕ್ರಮ

Published on

ಹುಣಸೂರು: ಆದಿವಾಸಿಗಳ ಹಕ್ಕು ರಕ್ಷಣೆ ಹಾಗೂ ಕ್ಷೇಮಾಭಿವೃದ್ಧಿಗೆ 1980ರಲ್ಲಿ ಸ್ಥಾಪನೆಗೊಂಡ ಡೀಡ್ ಮತ್ತು ಬುಡಕಟ್ಟು ಕೃಷಿಕರ ಸಂಘಕ್ಕೀಗ 45 ರ ಸಂಭ್ರಮ. ಮುಂದಿನ ಮೂರು ತಿಂಗಳು ‘ಆದಿವಾಸಿಗಳ ನಡಿಗೆ ತಮ್ಮ ತಮ್ಮ ನೆಲೆಗಳ ಕಡೆಗೆ’ ಎಂಬ ವಿಶೇಷ ಕಾರ್ಯಕ್ರಮವನ್ನು ವಿವಿಧ ಆದಿವಾಸಿ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹೆಮ್ಮಿಗೆ ಹರ್ಷ ತಿಳಿಸಿದರು.

ನಗರದ ಡೀಡ್ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸೆ.1 ಡೀಡ್ ಹುಟ್ಟಿದ ದಿನ. ಡಿ.1 ಬುಡಕಟ್ಟು ಕೃಷಿಕರ ಸಂಘ ಹುಟ್ಟಿದ ದಿನವಾಗಿದ್ದು, 2025ರಿಂದ 2030 ರವರೆಗೆ ವರ್ಷದ ಪ್ರತಿ 3 ತಿಂಗಳು ಆದಿವಾಸಿಗಳ ನಡಿಗೆ ತಮ್ಮ ತಮ್ಮ ನೆಲೆಗಳ ಕಡೆಗೆ ಎಂಬ ವಿಶೇಷ ಕಾರ್ಯಕ್ರಮ ಕೈಗೊಳ್ಳಲಾಗುವುದು. ತಮ್ಮ ಪರಂಪರೆಯ ಅರಣ್ಯ ನೆಲಸುಗಳಲ್ಲಿ ತಮ್ಮ ತಮ್ಮ ದೇವರಿಗೆ ಪೂಜೆ ಸಲ್ಲಿಸುವುದು, ಪೂರ್ವಿಕರ ಸ್ಮಶಾನಗಳಿಗೆ ಭೇಟಿ ಇತ್ತು ಹಿರಿಯರ ಆತ್ಮಕ್ಕೆ ಪೂಜೆ ಸಲ್ಲಿಸಿ, ಸ್ಮರಣೆ ಮಾಡುವುದು, ಗಿಡಮೂಲಿಕೆ ಔಷಧ ಸಂಗ್ರಹ, ಕಾಡಿನ ಕಿರು ಉತ್ಪನ್ನಗಳನ್ನು ಸಂಗ್ರಹ ಮಾಡುವುದು, ಅರಣ್ಯ ಹಕ್ಕು ಮಾನ್ಯತೆಯ ಕಾಯ್ದೆ 2006ರ ಪ್ರಕಾರ 2011ರಲ್ಲಿ ಸಲ್ಲಿಸಿರುವ ಅರ್ಜಿಗಳ ಅನ್ವಯ ವೈಯಕ್ತಿಕ ಅರಣ್ಯಭೂಮಿ ಹಕ್ಕು, ಸಾಮೂಹಿಕ ಅರಣ್ಯ ಹಕ್ಕು, ಕಾಡಿನ ಕಿರುದಿನಸಿ ಮೇಲಿನ ಹಕ್ಕು, ನೆಲೆಗಳ ಮೇಲಿನ ಹಕ್ಕುಗಳ ಮಾನ್ಯತಾ ಪತ್ರಕ್ಕೆ ಚಳವಳಿ ನಡೆಸಿ ಹಕ್ಕುಪತ್ರ ಪಡೆಯುವ ಕಾರ್ಯಕ್ರಮಗಳನ್ನು ಹಮ್ಮಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಕಾಡಿಂದ ಪುನರ್ವಸತಿ ನೀಡದೆ ಆದಿವಾಸಿ ಹಕ್ಕು ಉಲ್ಲಂಘನೆ ಮಾಡಿ ವನ್ಯಜೀವಿಗಳ ಕಾಯ್ದೆ ಹೆಸರಲ್ಲಿ ಹೊರಹಾಕಿರುವ 3,418 ಕುಟುಂಬಗಳಿಗೆ ಹೈಕೋರ್ಟ್ 2009 ಏ. 3ರ ಆದೇಶ ಹಾಗೂ ಅದರ ಸಮಿತಿ ವರದಿಯ ಶಿಫಾರಸಿನ ಅನ್ವಯ ಪುನರ್ವಸತಿಗೆ ಆಗ್ರಹಿಸುವುದು, ಅಗತ್ಯ ಬಿದ್ದರೆ ನ್ಯಾಯಾಲಯದಲ್ಲಿ ನಿಂದನೆ ಮೊಕದ್ದಮೆ ದಾಖಲು ಮಾಡಿ ಕೋರ್ಟ್ ಮೆಟ್ಟಿಲೇರುವ ತೀರ್ಮಾನ ಕೈಗೊಳ್ಳುವುದು. 2025 ಜ.29ರ ಆದಿವಾಸಿ ಸಂಸತ್ ಅಧಿವೇಶನದ 18 ಠರಾವುಗಳನ್ನು ಸರ್ಕಾರ ಅನುಷ್ಠಾನಗೊಳಿಸಲು ಆಗ್ರಹಿಸುವುದು. ನಗರದಲ್ಲಿ ಒಂದು ಹಾಡಿ ನಿರ್ಮಾಣಕ್ಕೆ ಹಾಗೂ ಹುಣಸೂರನ್ನು ಜಿಲ್ಲಾ ಕೇಂದ್ರವಾಗಿ ರೂಪಿಸಲು ಸರ್ಕಾರವನ್ನು ಆಗ್ರಹಿಸುವುದು. ಆದಿವಾಸಿಗಳಿಗಿರುವ ಸಂವಿಧಾನದ ರಕ್ಷಾ ಕವಚ 5ನೇ ಅನುಸೂಚಿತ ಪ್ರದೇಶ ಘೋಷಣೆಗೆ ಆಗ್ರಹಿಸಿ ಆದಿವಾಸಿ ಪಂಚಾಯತ್ ಕಾಯ್ದೆ ಜಾರಿ ಮಾಡುವುದು.. ಹೀಗೆ ಮುಂತಾದ ಹಕ್ಕೊತ್ತಾಯ ಕಾರ್ಯಕ್ರಮವನ್ನು 3 ತಿಂಗಳು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ ಮಾತನಾಡಿ, 2025ರಿಂದ 2030 ರವರೆಗೆ ಸಂಘ ಸಂಸ್ಥೆಗಳು 5 ವರ್ಷಗಳು ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು. 2030ರಲ್ಲಿ ಸಂಘ ಸಂಸ್ಥೆಗಳ ರಜತ ಮಹೋತ್ಸವ ಸಮಾರಂಭ ನಡೆಯಲಿದೆ. ಇದಕ್ಕಾಗಿ ದುಡಿಯುವ ನೂರು ಆದಿವಾಸಿ ಬುಡಕಟ್ಟು ಮುಂದಾಳುಗಳನ್ನು ಸಿದ್ಧಗೊಳಿಸಲಾಗುವುದು. ಮಾಧ್ಯಮದ ಸಹಕಾರದಿಂದ 25 ಆದಿವಾಸಿ ಪತ್ರಕರ್ತರನ್ನು ಸಿದ್ಧಗೊಳಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ, ಹಾಡಿಗಳ ಅರಣ್ಯ ಹಕ್ಕು ಸಮಿತಿ ಒಕ್ಕೂಟಗಳ ಅಧ್ಯಕ್ಷ ತೆಕ್ಲಾಡಿ ಶಿವಣ್ಣ, ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷ ಭರತವಾಡಿ ಲಕ್ಷ್ಮೀ, ಹಿರಿಯ ಮುಖಂಡ ವಿಠಲ್ ನಾಣಾಚ್ಚಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net