

ಪುಣೆ: ಕೆಲವೊಂದು ಕಡೆ ಹಾಕಿರುವ ಸೂಚನಾ ಫಲಕಗಳಲ್ಲಿನ ತಪ್ಪುಗಳು ಗಮನ ಸೆಳೆದರೆ, ಇನ್ನು ಕೆಲವು ಕಡೆ ಅವುಗಳಲ್ಲಿನ ತಪ್ಪುಗಳು ಗಮನ ಸೆಳೆಯತ್ತದೆ. ಆ ಮೂಲಕ ಅಂಥ ಸೂಚನೆಗಳೇ ಟಾಕ್ ಆಫ್ ದ ಟೌನ್ ಎನ್ನುವ ರೀತಿಯಲ್ಲಿ ಚರ್ಚೆಗೆ ಒಳಗಾಗುತ್ತವೆ, ಇಲ್ಲವೇ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತವೆ.
ಅಂಥದ್ದೇ ಒಂದು ಸೂಚನಾ ಫಲಕ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದ್ದು, ಹಲವರ ಗಮನ ಸೆಳೆಯಲಾರಂಭಿಸಿದೆ. ಅಷ್ಟಕ್ಕೂ ಈ ಸೂಚನಾ ಫಲಕ ಗಮನ ಸೆಳೆಯುತ್ತಿರುವುದು ಅದರಲ್ಲಿನ ಸೂಚನೆಯ ಕಾರಣಕ್ಕೆ.
ಪುಣೆಯ ಜಿಲ್ಲಾ ನ್ಯಾಯಾಲಯದಲ್ಲಿರುವ ಈ ಸೂಚನೆ ಮಹಿಳಾ ವಕೀಲರನ್ನು ಉದ್ದೇಶಿಸಿ ಹಾಕಿದ್ದಾಗಿದೆ. ನ್ಯಾಯಾಲಯದ ಕಲಾಪದ ವೇಳೆ ಮಹಿಳಾ ವಕೀಲರು ಅವರ ತಲೆಗೂದಲನ್ನು ಸರಿಪಡಿಸಿಕೊಳ್ಳುತ್ತಿರುವುದು ಪದೇಪದೆ ಕಂಡು ಬರುತ್ತಿದೆ. ಇದರಿಂದ ನ್ಯಾಯಾಲಯದ ಕಲಾಪಕ್ಕೆ ಅಡ್ಡಿ ಆಗುತ್ತಿದ್ದು, ಇಂಥ ಚಟುವಟಿಕೆಯಿಂದ ದೂರ ಇರುವಂತೆ ಮಹಿಳಾ ವಕೀಲರಿಗೆ ಸೂಚನೆ ನೀಡಲಾಗಿದೆ ಎಂದು ಈ ಫಲಕದಲ್ಲಿ ತಿಳಿಸಲಾಗಿದೆ.