ಕಿರಿಕಿರಿ ಕರೆಗಳ ಪ್ರಮಾಣ ಅಲ್ಪ ಇಳಿಕೆ! ಶೇ.27ರಷ್ಟು ಮೊಬೈಲ್ ಬಳಕೆದಾರರ ಅನಿಸಿಕೆ

ವಿಜಯವಾಣಿ (3)
Published on

ನವದೆಹಲಿ: ನೋಂದಾಯಿತವಲ್ಲದ ಟೆಲಿ ಮಾರ್ಕೆಟರ್​ಗಳ ಮೇಲೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ಕಿರಿಕಿರಿ ಕರೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ತಮಗೆ ಬರುತ್ತಿದ್ದ ಅನಗತ್ಯ ಕಿರಿಕಿರಿ ಕರೆಗಳು ಇತ್ತೀಚೆಗೆ ಕಡಿಮೆಯಾಗಿವೆ ಎಂದು ಶೇ. 27ರಷ್ಟು ಮೊಬೈಲ್ ಫೋನ್ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಈ ವಿಷಯ ಲೋಕಲ್ ಸರ್ಕಲ್ಸ್ ಎಂಬ ಆನ್ಲೈನ್ ವೇದಿಕೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಸಮೀಕ್ಷಾ ವರದಿಯನ್ನು ಕಂಪನಿ ಸೋಮವಾರ ಬಿಡುಗಡೆ ಮಾಡಿದೆ.

‘ಆದರೆ ಇನ್ನೂ ಕಿರಿಕಿರಿ ಕರೆಗಳು ಕಡಿಮೆಯಾಗಿಲ್ಲ. ಬದಲಿಗೆ ರೋಬೋ ಕಾಲ್​ಗಳು (ಧ್ವನಿಮುದ್ರಿತ ಅಥವಾ ಸ್ವಯಂಚಾಲಿತ ಕರೆಗಳು) ಹೆಚ್ಚಾಗಿವೆ ಎಂಬುದಾಗಿ ಮತ್ತಷ್ಟು ಮೊಬೈಲ್ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಟ್ರಾಯ್ನವರು ಸ್ಪ್ಯಾಮರ್​ಗಳನ್ನು ಬ್ಲ್ಯಾಕ್​ಲಿಸ್ಟ್​ಗೆ ಹಾಕಿದ ಬಳಿಕ ಕಿರಿಕಿರಿಯ ಕರೆಗಳು ಸಂಪೂರ್ಣವಾಗಿ ಮಾಯವಾಗಿವೆ ಎಂದವರ ಸಂಖ್ಯೆ ಕೇವಲ ಶೇ. 9ರಷ್ಟಿತ್ತು. ಕಳೆದ 5 ವರ್ಷಗಳಿಂದ ಸತತವಾಗಿ ಕಂಪನಿ ಈ ಸರ್ವೆ ನಡೆಸುತ್ತಿದ್ದು, ಇದೇ ಮೊದಲ ಬಾರಿಗೆ ಶೇ. 27ರಷ್ಟು ಮೊಬೈಲ್ ಬಳಕೆದಾರರು ಕಿರಿಕಿರಿ ಕರೆಗಳ ಪ್ರಮಾಣ ಇಳಿಕೆಯಾಗಿದೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ದೇಶದ 309 ಜಿಲ್ಲೆಗಳಲ್ಲಿ ಸೆ.15ರಿಂದ ನ.20ರವರೆಗೆ ನಡೆಸಿದ ಆನ್​ಲೈನ್ ಸಮೀಕ್ಷೆಯಲ್ಲಿ ಸುಮಾರು 18 ಸಾವಿರ ಮೊಬೈಲ್ ಫೋನ್ ಬಳಕೆದಾರರು ಪಾಲ್ಗೊಂಡಿದ್ದರು ಎಂದು ಕಂಪನಿಯ ಸ್ಥಾಪಕ ಸಚಿನ್ ತಪಾರಿಯಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net