

ನವದೆಹಲಿ: ಕಳೆದ ಹಲವು ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಶುಕ್ರವಾರ ಯಥಾಸ್ಥಿತಿ ಕಾಯ್ದುಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇ. 99.9ರಷ್ಟು ಶುದ್ಧತೆಯ ಚಿನ್ನವು 10 ಗ್ರಾಂಗೆ 79,150 ರೂ.ನಂತೆ ಮಾರಾಟವಾಯಿತು. ಗುರುವಾರವೂ ಇದೇ ದರ ಇತ್ತು. ಸತತ ಮೂರು ದಿನಗಳಿಂದ ಏರಿಕೆ ಕಂಡಿದ್ದ ಬೆಳ್ಳಿ ದರವು ಶುಕ್ರವಾರ ಕೊಂಚ ಕಡಿಮೆಯಾಯಿತು. ಬೆಳ್ಳಿಯ ಬೆಲೆಯು 300 ರೂ. ಇಳಿಕೆ ಕಂಡು ಕೆಜಿಗೆ 93,500 ರೂ.ಗೆ ತಲುಪಿತು ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮೀಸಲು ಉದ್ದೇಶಕ್ಕಾಗಿ ಅಕ್ಟೋಬರ್ ತಿಂಗಳಲ್ಲಿ 27 ಟನ್ ಚಿನ್ನ ಖರೀದಿಸಿದೆ. 2024ರ ಜನವರಿಯಿಂದ ಅಕ್ಟೋಬರ್ವರೆಗೆ ಒಟ್ಟು 77 ಟನ್ ಚಿನ್ನ ಖರೀದಿಸಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ತಿಳಿಸಿದೆ. 2023ರ ಇದೇ ಅವಧಿಗೆ ಹೋಲಿಸಿದರೆ ಚಿನ್ನ ಖರೀದಿಯಲ್ಲಿ 5 ಪಟ್ಟು ಏರಿಕೆಯಾಗಿದೆ. ಆರ್ಬಿಐ ಬಳಿ ಪ್ರಸ್ತುತ ಒಟ್ಟು 882 ಟನ್ ಚಿನ್ನ ಮೀಸಲು ಇದೆ.‘