

ಬೆಂಗಳೂರು: ಚಂದ್ರನ ದಕ್ಷಿಣ ಅಂಗಳದಲ್ಲಿ ಯಶಸ್ವಿ ಅವತರಣದ ಐತಿಹಾಸಿಕ ಸಾಧನೆಗೆ ಇಸ್ರೋ ಚಂದ್ರನೌಕೆ ಮತ್ತಷ್ಟು ಹತ್ತಿರವಾಗಿದೆ. ಚಂದ್ರಯಾನ-3 ಮಿಷನ್ನ ಬಾಹ್ಯಾಕಾಶ ನೌಕೆಯ ಪ್ರೊಪಲ್ಶನ್ ಮಾಡ್ಯೂಲ್ನಿಂದ ಲ್ಯಾಂಡರ್ ಮಾಡ್ಯೂಲ್ ಗುರುವಾರ ಯಶಸ್ವಿಯಾಗಿ ಬೇರ್ಪಟ್ಟಿದ್ದು, ಚಂದ್ರನ ದಕ್ಷಿಣ ಧ್ರುವದಿಂದ ನೌಕೆ ಈಗ ಅಂದಾಜು 160 ಕಿ.ಮೀ.ಗಳಷ್ಟು ಸನಿಹದಲ್ಲಿದೆ..!
ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಹೊಂದಿರುವ ಲ್ಯಾಂಡರ್ ಮಾಡ್ಯೂಲ್ ಇದೀಗ ಚಂದ್ರನಿಗೆ ಇನ್ನೂ ಹತ್ತಿರವಾಗುವ ಕಕ್ಷೆಗೆ ಇಳಿಯುವ ಕಾರ್ಯಾಚರಣೆಗೆ ಸಿದ್ಧವಾಗಿದೆ. ಚಂದಿರನ ದಕ್ಷಿಣ ಧ್ರುವದ ಮೇಲೆ ಅದನ್ನು ಆಗಸ್ಟ್ 23ರಂದು ಇಳಿಸಲಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.
ಬೇರ್ಪಡೆ ಪ್ರಕ್ರಿಯೆ ನಂತರ ಲ್ಯಾಂಡರ್ ‘ಡೀಬೂಸ್ಟ್’ಗೆ (ನಿಧಾನಗೊಳಿಸುವಿಕೆ ಪ್ರಕ್ರಿಯೆ) ಒಳಪಡಲಿದೆ ಎಂದು ಇಸ್ರೋ ಹೇಳಿದೆ. ಜು.14ರಂದು ಉಡಾವಣೆಗೊಂಡ ಚಂದ್ರಯಾನ-3 ಆ.5ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಆ.6, 9, 14 ಮತ್ತು 16ರಂದು ಉಪಗ್ರಹದ ಕಕ್ಷೆ ತಗ್ಗಿಸುವ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು.
ನಿರ್ಣಾಯಕ ಪ್ರಕ್ರಿಯೆ: ಲ್ಯಾಂಡರ್ನ ವೇಗವನ್ನು 30 ಕಿಲೋ ಮೀಟರ್ ಎತ್ತರದಿಂದ ಅಂತಿಮ ಲ್ಯಾಂಡಿಂಗ್ಗೆ ತಗ್ಗಿಸುವ ಪ್ರಕ್ರಿಯೆಯೇ ಲ್ಯಾಂಡಿಂಗ್ನ ಅತ್ಯಂತ ನಿರ್ಣಾಯಕ ಭಾಗವಾಗಿದೆ. ಬಾಹ್ಯಾಕಾಶ ನೌಕೆಯನ್ನು ಸಮತಲ ಕೋನದಿಂದ ಲಂಬ ಕೋನಕ್ಕೆ ವರ್ಗಾಯಿಸುವ ಸಾಮರ್ಥ್ಯವನ್ನು ನಾವು ಇಲ್ಲಿ ಪ್ರದರ್ಶಿಸಬೇಕಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಇತ್ತೀಚೆಗೆ ತಿಳಿಸಿದ್ದರು. ಲ್ಯಾಂಡಿಂಗ್ ಪ್ರಕ್ರಿಯೆಯ ಆರಂಭದಲ್ಲಿ ವೇಗವು ಪ್ರತಿ ಸೆಕೆಂಡ್ಗೆ 1.68 ಕಿಲೋ ಮೀಟರ್ ಆಗಿರುತ್ತದೆ. ಆದರೆ, ಇಲ್ಲಿ ನೌಕೆಯು ಚಂದ್ರನ ಮೇಲ್ಮೈಗೆ ಸಮತಲವಾಗಿದ್ದು, ಇದನ್ನು ಲಂಬಾಂತರವಾಗಿ ತಿರುಗಿಸಬೇಕಾಗುತ್ತದೆ. ಅಂದರೆ ಬಹುತೇಕ 90 ಡಿಗ್ರಿಯಷ್ಟು ವಾಲಿಸಬೇಕಾಗುತ್ತದೆ. ಇದು ಗಣಿತಶಾಸ್ತ್ರೀಯವಾಗಿ ಬಹಳ ಆಸಕ್ತಿಕರ ಪ್ರಕ್ರಿಯೆ. ಇದನ್ನು ಯಶಸ್ವಿಯಾಗಿ ಕೈಗೊಳ್ಳಲು ಹಲವು ಪ್ರಾಯೋಗಿಕ ಪರೀಕ್ಷೆಗಳನ್ನು ಮಾಡಲಾಗಿದೆ. ಕಳೆದ ಬಾರಿ, ಅಂದರೆ ಚಂದ್ರಯಾನ-2ರಲ್ಲಿ ಸಮಸ್ಯೆಯಾಗಿದ್ದೇ ಈ ಹಂತದಲ್ಲಿ ಎಂದು ಸೋಮನಾಥ್ ವಿವರಿಸಿದ್ದರು.
ಭೂಮಿಯಿಂದ ದೂರಕ್ಕೆ: ಜು.14ರ ಉಡಾವಣೆ ನಂತರ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ದೂರಗೊಳಿಸುವ ಐದು ಕಾರ್ಯಾಚರಣೆಗಳನ್ನು ಇಸ್ರೋ ನಡೆಸಿದೆ. ಆಗಸ್ಟ್ 1ರ ಮಹತ್ವದ ಸ್ಲಿಂಗ್ಶಾಟ್ ಕಾರ್ಯಾಚರಣೆ ಮೂಲಕ ನೌಕೆಯನ್ನು ಭೂಮಿಯ ಕಕ್ಷೆಯಿಂದ ಚಂದ್ರನತ್ತ ಕಳಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು. ಈ ಮೂಲಕ ಭೂಮಿಯ ಕಕ್ಷೆ ಸುತ್ತುವ ಪ್ರಕ್ರಿಯೆಯಿಂದ ನೌಕೆ ಹೊರಬಂದಿತ್ತು ಹಾಗೂ ಚಂದ್ರನಿಗೆ ಸಮೀಪವಾಗುವ ಪಥದಲ್ಲಿ ಸಾಗಿತ್ತು. ಇದೊಂದು ಮಹತ್ವದ ಕ್ಷಣವಾಗಿದ್ದು ಲ್ಯಾಂಡರ್ ಹೇಗೆ ಕಾರ್ಯಾಚರಿಸುತ್ತದೆ ಎಂದು ಸೂಚಿಸುತ್ತದೆ ಎಂದು ಚಂದ್ರಯಾನ-1ರ ಯೋಜನಾ ನಿರ್ದೇಶಕ ಎಂ. ಅಣ್ಣಾದೊರೈ ಹೇಳಿದ್ದಾರೆ.
ಲ್ಯಾಂಡರ್ ಧನ್ಯವಾದ: ನಿಗದಿತ ಹಂತದವರೆಗೆ ಕೊಂಡೊಯ್ದಿದ್ದಕ್ಕಾಗಿ ಪ್ರೊಪಲ್ಶನ್ ಮಾಡ್ಯೂಲ್ಗೆ (ಪಿಎಂ) ಲ್ಯಾಂಡರ್ ಧನ್ಯವಾದ ಹೇಳಿದೆ. ‘ಸಂಗಾತಿಯೇ ಪಯಣಕ್ಕಾಗಿ ಧನ್ಯವಾದಗಳು’ ಎಂದು ಇಸ್ರೋ ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.
ಏನಾಗಲಿದೆ ಬೇರ್ಪಟ್ಟ ಮಾಡ್ಯೂಲ್?: ಲ್ಯಾಂಡರ್ನಿಂದ ಬೇರ್ಪಟ್ಟಿರುವ ಪ್ರೊಪೆಲ್ಶನ್ ಮಾಡ್ಯೂಲ್ ಇನ್ನು ಕೆಲ ತಿಂಗಳು ಅಥವಾ ವರ್ಷಗಳ ಕಾಲ ಚಂದ್ರನನ್ನು ಪರಿಭ್ರಮಿಸುತ್ತ, ಉಪಗ್ರಹದ ಮೇಲ್ಮೈ ಅಧ್ಯಯನ ನಡೆಸಲಿದೆ.
ವಿಕ್ರಂ ಮತ್ತು ಪ್ರಜ್ಞಾನ್ ಹೇಗೆ ಕಾರ್ಯನಿರ್ವಹಿಸಲಿವೆ ಎಂಬುದರ ಬಗ್ಗೆ ಇಡೀ ವಿಶ್ವವೇ ಕಾತರದಿಂದ ಕಾದು ನೋಡುತ್ತಿದೆ. ನನಗೂ ಈ ಬಗ್ಗೆ ಬಹಳ ಕುತೂಹಲವಿದೆ.
-ಎಂ. ಅಣ್ಣಾದೊರೈ, ಚಂದ್ರಯಾನ-1 ಪ್ರಾಜೆಕ್ಟ್ ಡೈರೆಕ್ಟರ್