

ವಿಜಯಪುರ: ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಮೂರು ದಿನದ ಹಿಂದೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಇದರ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ 16 ವರ್ಷದ ಬಾಲಕಿ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ ಕೇಸ್ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ವಿಜಯಪುರ ಜಿಲ್ಲೆಯಲ್ಲೂ ಮತ್ತೊಂದು ಹೀನ ಕೃತ್ಯ ನಡೆದಿದೆ.
ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಡಾಬಾದಲ್ಲಿ ತಂದೆಯೊಂದಿಗೆ ವಾಸವಿದ್ದ 13 ವರ್ಷದ ಬಾಲಕಿ ಮೇಲೆ ಡಾಬಾ ಮಾಲೀಕ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ದೂರು ನೀಡಿದ್ದಾರೆ.
ಆರೋಪಿ ದೇವಿಂದ್ರ ಆ.23 ಹಾಗೂ ಆ.24ರಂದು ನನ್ನ ಮಗಳನ್ನು ಬೆದರಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆಯ ತಂದೆ ಶುಕ್ರವಾರ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಎಸ್ಪಿ ಡಾ.ರಾಮ ಅರಸಿದ್ದಿ, ಇಂಡಿ ಡಿವೈಎಸ್ಪಿ, ಸಿಪಿಐ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.