

ಒಣ ಆಹಾರ, ಮೊದಲೇ ಸಿದ್ಧಪಡಿಸಿಟ್ಟ ಆಹಾರ ಸೇವನೆ, ವಾತವನ್ನು ಹೆಚ್ಚುಗೊಳಿಸುವ ಆಹಾರ ವ್ಯಂಜನಗಳ ಸೇವನೆ, ವಾತವನ್ನು ವರ್ಧಿಸುವಂತಹ ಆಚಾರ ವಿಚಾರ ಹವ್ಯಾಸಗಳು ಮುಖ್ಯ ಪಾತ್ರವನ್ನೇ ವಹಿಸುತ್ತವೆ. ರಾತ್ರಿ ನಿದ್ದೆ ಮಾಡದೆ ಜಾಗರಣೆ ಮಾಡುವುದರಿಂದಲೂ ಶರೀರದಲ್ಲಿ ವಾತವು ಹೆಚ್ಚಾಗುತ್ತದೆ. ಖಾರ, ಕಹಿ, ಒಗರು ರುಚಿಯ ಆಹಾರ ಪದಾರ್ಥಗಳನ್ನೇ ಹೆಚ್ಚಾಗಿ ಸೇವಿಸುವುದೂ ವಾತವನ್ನು ಹೆಚ್ಚಿಸುತ್ತದೆ.
ಅತಿಯಾಗಿ ಮಾತನಾಡುವುದು, ಏರುದನಿಯಲ್ಲಿ ಭಾಷಣ ಮಾಡುವುದು, ನಿರಂತವಾಗಿ ಪ್ರಯಾಣದಲ್ಲಿ ತೊಡಗುವುದು, ಈಜು, ಕುದುರೆ ಸವಾರಿ, ಆಟೋಟಗಳನ್ನು ಮಿತಿಮೀರಿ ಮಾಡುವುದು, ಹಾಲು, ಮೊಸರು, ಬೆಣ್ಣೆ, ತುಪ್ಪಗಳನ್ನು ಪೂರ್ತಿಯಾಗಿ ವರ್ಜಿಸುವುದು, ಜಿಡ್ಡುಯುಕ್ತ ಆಹಾರ ಬಿಟ್ಟು ಶುಷ್ಕ ಆಹಾರದತ್ತಲೇ ನಾಲಿಗೆಯನ್ನು ಚಾಚುವುದು, ಹದಿನೆಂಟು ವಿಧವಾದ ವಿರುದ್ಧಾಹಾರಗಳನ್ನು ಸೇವಿಸುವುದು, ಜೀರ್ಣಕ್ಕೆ ಕಷ್ಟಕರವಾದ ಆಹಾರ ಸೇವನೆ, ಎಲ್ಲ ತರಕಾರಿಗಳನ್ನೂ ಬೇಯಿಸದೇ ತಿನ್ನುವುದು, ನೆಲದ ಕೆಳಗಡೆ ಬೆಳೆಯುವ ಗಡ್ಡೆಗೆಣಸುಗಳನ್ನು ಹೆಚ್ಚಾಗಿ ತಿನ್ನುವುದು, ತಿಂದಾಗ ಬಾಯಿಯಲ್ಲಿ ನೀರಾರಿದ ಅನುಭವ ನೀಡುವಂತಹ ಹಣ್ಣುಗಳಾದ ನೇರಳೆಹಣ್ಣು, ಜಂಬುನೇರಳೆ ಮುಂತಾದ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದು, ಹೊತ್ತು ಗೊತ್ತಿಲ್ಲದೆ ಬೇಕು ಬೇಕೆನಿಸಿದಾಗಲೆಲ್ಲಾ ಆಹಾರ ಸೇವಿಸುತ್ತಾ ಹೋಗುವುದು, ತನ್ನ ದೇಹದ ಶಕ್ತಿಯ ಇತಿಮಿತಿಯನ್ನು ಅರಿಯದೆ ಮಿತಿಮೀರಿ ಶಾರೀರಿಕ ಶ್ರಮದಾಯಕ ಕೆಲಸಗಳನ್ನು ಮಾಡುವುದು, ಲೈಂಗಿಕವಾಗಿ ಅಕಾಲದಲ್ಲಿ ತೊಡಗಿಸಿಕೊಳ್ಳುವುದು, ವಾತ ಉಪಶಮನಕ್ಕೆ ಅತ್ಯಂತ ಅವಶ್ಯವಾದ ಶರೀರಕ್ಕೆ ಎಣ್ಣೆ ಹಚ್ಚಿ ಮಾಡುವ ಸ್ನಾನವನ್ನು ಉಪೇಕ್ಷೆ ಮಾಡುವುದು, ತಲೆಗೆ ನಿಯಮಿತವಾಗಿ ಎಣ್ಣೆಯನ್ನು ಹಾಕದಿರುವುದು - ಇವೆಲ್ಲವೂ ದೇಹದಲ್ಲಿ ವಾತವನ್ನು ಹೆಚ್ಚಿಸಿ ವಾತದ ಸಹಜ ಚಲನೆಗೆ ಅಡ್ಡಿಯುಂಟು ಮಾಡಿ ಉದಾವರ್ತ ರೋಗವನ್ನು ಉಂಟುಮಾಡುತ್ತವೆ.
‘ನಿದಾನಸ್ಯ ಪರಿವರ್ಜನಮ್ ಎಂಬುದು ಯಾವುದೇ ರೋಗದ ಚಿಕಿತ್ಸೆಯಲ್ಲೂ ನಾವಿಡಬೇಕಾದ ಮೊದಲ ಹೆಜ್ಜೆ. ಅದರಂತೆ ಮೇಲೆ ಹೇಳಿದ ವಾತಕಾರಕ ಕಾರಣಗಳ ವರ್ಜನೆ ಉದಾವರ್ತದ ನಿವಾರಣೆಯಲ್ಲಿ ನಾವು ಪಾಲಿಸಬೇಕಾದ ಪ್ರಥಮ ನಿಯಮ. ಅಪಾನವಾಯು, ಮೂತ್ರ, ಮಲಗಳ ತಡೆ ಹಾಗೂ ಅದರಿಂದ ಹೊಟ್ಟೆಯುಬ್ಬರ, ಸುಸ್ತು, ಮೂತ್ರಾಶಯ, ಎದೆ, ಹೊಟ್ಟೆಯ ಭಾಗದಲ್ಲಿ ತೀವ್ರ ವೇದನೆ, ಬೆನ್ನು ಹಾಗೂ ಪಕ್ಕೆಗಳಲ್ಲಿ ಕಸಿವಿಸಿ, ಅಜೀರ್ಣ, ವಾಕರಿಕೆ, ಗುದಪ್ರದೇಶದಲ್ಲಿ ನೋವು, ಮಲಬದ್ಧತೆ, ವೀರ್ಯಸ್ರಾವ ಸರಿಯಾಗಿ ಆಗದೇ ಇರುವುದು ಇವೆಲ್ಲವೂ ಉದಾವರ್ತದ ಸಾಮಾನ್ಯ ಲಕ್ಷಣಗಳು.
ವಾತವನ್ನು ಸರಿದಾರಿಗೆ ತರುವ ವಾತಾನುಲೋಮನ, ವಾತಹರ ಚಿಕಿತ್ಸೆಗೆ ಒತ್ತು ನೀಡಲಾಗುತ್ತದೆ. ಎಳ್ಳೆಣ್ಣೆ, ನಾರಾಯಣ ತೈಲ, ಅಗುರ್ವಾದಿ ತೈಲ, ಸೈಂಧವಾದಿ ತೈಲ, ಏರಂಡತೈಲಗಳಿಗೆ ಸ್ನೇಹನ ಚಿಕಿತ್ಸೆ ಅಭ್ಯಂಗಗಳಲ್ಲಿ ವೈದ್ಯರು ಆದ್ಯತೆ ನೀಡುತ್ತಾರೆ. ಸ್ವೇದನ ಚಿಕಿತ್ಸೆಯೂ ಉಪಕಾರಿ. ಪಂಚಕರ್ಮದ ಸ್ನೇಹವಿರೇಚನ, ಸಹಚರಾದಿ ತೈಲದಿಂದ ಅನುವಾಸನ ಬಸ್ತಿ, ದಶಮೂಲಕ್ವಾಥದೊಂದಿಗೆ ನಿರೂಹಬಸ್ತಿ, ಗುದವರ್ತಿ ಚಿಕಿತ್ಸೆಗಳೆಲ್ಲವೂ ಪರಿಣಾಮಕಾರಿ. ಅಳಲೆಕಾಯಿ, ತ್ರಿಕಟು, ಹಿಂಗು, ಹರಳು ಹಾಗೂ ನೂರಾರು ಉಪಯುಕ್ತ ಔಷಧಿ ದ್ರವ್ಯಗಳಲ್ಲಿ ಸೇರಿದೆ. ಅಪಾನವಾತ ನಿರೋಧಜ ಉದಾವರ್ತದಲ್ಲಿ ಸ್ನೇಹನ, ಸ್ವೇದನ, ಆಸ್ಥಾಪನ ಬಸ್ತಿ, ಮಲನಿರೋಧದಿಂದಾದ ಉದಾವರ್ತದಲ್ಲಿ ಸ್ನೇಹನ, ಸ್ವೇದನ, ವಿರೇಚನ, ಗುದವರ್ತಿ, ಮೂತ್ರತಡೆಯಿಂದ ಉಂಟಾದ ಉದಾವರ್ತದಲ್ಲಿ ಮೂತ್ರಲ ಔಷಧಗಳು, ಆಕಳಿಕೆ ತಡೆಯುವುದರಿಂದ ಉದ್ಭವಿಸಿದ ತೊಂದರೆಯಲ್ಲಿ ಸ್ನೇಹನ, ಸ್ವೇದನ, ಕಣ್ಣೀರನ್ನು ಬಲವಂತವಾಗಿ ತಡೆಹಿಡಿದು ತೊಂದರೆಯಾದಾಗ ಸ್ನೇಹನ, ಸ್ವೇದನಗಳ ಜೊತೆಯಲ್ಲಿ ಅಂಜನಗಳ ಚಿಕಿತ್ಸೆಗಳು ಪರಿಣಾಮಕಾರಿ.
ಸೀನು ತಡೆದಾಗ ಉದಯ ಕಾಲದ ಸೂರ್ಯನನ್ನು ನೋಡುವುದೂ ಸೇರಿದಂತೆ ಪೀನಸ ನಿವಾರಕ ಚಿಕಿತ್ಸೆಗಳು, ವಾಂತಿ ತಡೆಯುವುದರಿಂದ ಉದ್ಭವಿಸಿದ ಕಾಯಿಲೆಗಳಿಗೆ ವಮನ ಕರ್ಮ, ಸ್ನೇಹನಸ್ಯ, ಲಂಘನ, ವ್ಯಾಯಾಮ, ಶುಕ್ರ ತಡೆದು ಉದಾವರ್ತವಾದಾಗ ಸಮರ್ಪಕ ಲೈಂಗಿಕ ಕ್ರಿಯೆ, ಹಾಲು ಅನ್ನ ಸೇವನೆ, ಅಭ್ಯಂಗ, ನಿರೂಹ ಬಸ್ತಿಗಳು ಪರಿಹಾರದಲ್ಲಿ ಸೇರಿವೆ. ಹಸಿವಾದಾಗ ಆಹಾರ ಸೇವನೆ ಮಾಡದೆ ಉಂಟಾದ ಉದಾವರ್ತದಲ್ಲಿ ಸವಿರುಚಿಯ ಹಿತಕರ ಷಡ್ರಸ ಭೋಜನವನ್ನು ಮಿತಪ್ರಮಾಣದಲ್ಲಿ ಮಾಡುವುದರೊಂದಿಗೆ ಸ್ನೇಹನ ಚಿಕಿತ್ಸೆ ಪೂರಕವಾಗಿರುತ್ತದೆ. ಬಾಯಾರಿಕೆ ತಡೆದು ಹುಟ್ಟಿಕೊಂಡ ಉದಾವರ್ತ ಉಪಶಮನಕ್ಕೆ ಸಿಹಿ ಅನ್ನಪಾನ, ದ್ರಾಕ್ಷಾರಸ, ಏದುಸಿರಿನಿಂದಾದ ಉದಾವರ್ತದಲ್ಲಿ ವಿಶ್ರಾಂತಿ, ಪಥ್ಯಾಹಾರ ಸೇವನೆಯೇ ಮುಖ್ಯವಾಗುತ್ತದೆ. ನಿದ್ರೆಯನ್ನು ತಡೆದು ಬಂದ ಉದಾವರ್ತದಲ್ಲಿ ಎಮ್ಮೆಯ ಹಾಲು, ಎಳ್ಳೆಣ್ಣೆಯಿಂದ ಅಭ್ಯಂಗ, ಸರಿಯಾದ ನಿದ್ರೆಯೇ ಸೂಕ್ತ ಪರಿಹಾರ. ಜೋಳದ ತಿಳಿನೀರು, ಹೆಸರುಬೇಳೆ ಕಟ್ಟು, ಖರ್ಜೂರ, ದ್ರಾಕ್ಷಿಹಣ್ಣು, ನಿಂಬೆಹಣ್ಣು, ಕೊತ್ತಂಬರಿ, ಓಮ, ಲವಂಗ, ಹಿಂಗು, ಬೆಳ್ಳುಳ್ಳಿ, ಒಂಟೆಯ ಹಾಲು, ಶುಂಠಿ, ಕಾಳುಮೆಣಸು, ತರಕಾರಿಗಳು, ಹಾಲಿನ ಉತ್ಪನ್ನಗಳು ಹಿತಕರ ಆಹಾರಗಳಲ್ಲಿ ಸೇರಿವೆ.
(ಪ್ರತಿಕ್ರಿಯಿಸಿ:vvsudina@gmail.com)