

ರಾಮನಗರ: ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯು ಮೊಟಕುಗೊಂಡಿದೆ. ಕರೊನಾ ಆರ್ಭಟ ಮುಗಿದ ಬಳಿಕ ಇಲ್ಲಿಂದಲೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಗುರುವಾರ ರಾಮನಗರ ಜಿಲ್ಲಾ ಕಚೇರಿಯಲ್ಲಿ ನಡೆದ ಪಕ್ಷದ ನಾಯಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯಾವ ಕಾರಣಕ್ಕೆ ಪಾದಯಾತ್ರೆ ನಿಲ್ಲಿಸಲಾಯಿತು ಎಂಬುದನ್ನೂ ವಿವರಿಸಿದ್ದಾರೆ.
ನಾವು ಎರಡು ತಿಂಗಳ ಹಿಂದೆ ಪಾದಯಾತ್ರೆ ಘೋಷಿಸಿದಾಗ ಕರೊನಾ ಹಾವಳಿ ಇರಲಿಲ್ಲ. ಹೀಗಾಗಿ ಪಾದಯಾತ್ರೆ ಆರಂಭಿಸಿದೆವು. ಈಗ ಕೋವಿಡ್ ಸೋಂಕು ಹೆಚ್ಚಾದ ಕಾರಣ ಇಲ್ಲಿಗೆ ನಿಲ್ಲಿಸುತ್ತಿದ್ದೇವೆ. ಮುಂದೆ ಇದೇ ನೆಲದಿಂದ ಮತ್ತೆ ಪಾದಯಾತ್ರೆ ಆರಂಭ ಆಗಲಿದೆ. ನಮ್ಮದು ಐತಿಹಾಸಿಕ ಹಿನ್ನೆಲೆಯುಳ್ಳ ರಾಜಕೀಯ ಪಕ್ಷ. ನಮಗೆ ನಮ್ಮದೇ ಆದ ಹಿನ್ನೆಲೆ ಇದೆ. ನಮ್ಮ ಜವಾಬ್ದಾರಿ ನಿರ್ವಹಿಸುತ್ತೇವೆ ಎಂದ ಸಿದ್ದರಾಮಯ್ಯ, ರಾಜ್ಯದಲ್ಲಿ ಕೋವಿಡ್ ಸೋಂಕಿತರು ಹೆಚ್ಚಾಗಲು ಬಿಜೆಪಿ ಕಾರಣವೇ ಹೊರತು ಕಾಂಗ್ರೆಸ್ ಅಲ್ಲ. ಬಿಜೆಪಿ ನಾಯಕರೇ ಹಲವು ಕಾರ್ಯಕ್ರಮಗಳನ್ನು ಮಾಡಿದರು. ಈಗ ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಟೀಕಿಸಿದರು.
ನಮ್ಮ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ನಿಷ್ಪಕ್ಷಪಾತವಾಗಿ ವರ್ತಿಸಿಲ್ಲ. ಹೇಗಾದರೂ ಮಾಡಿ ಪಾದಯಾತ್ರೆ ನಿಲ್ಲಿಸಬೇಕು ಎಂಬುದು ಅವರ ಉದ್ದೇಶ ಆಗಿತ್ತು. ಅದಕ್ಕಾಗಿ ದಿನಕ್ಕೊಂದು ಆದೇಶ ಹೊರಡಿಸುತ್ತಿದ್ದರು. ಇದೆಲ್ಲದರ ಹೊರತಾಗಿಯೂ ನಮಗೆ ಜನರ ಹಿತ ಮುಖ್ಯ. ಕೋವಿಡ್ ಸಂಖ್ಯೆ 15 ಸಾವಿರಕ್ಕೆ ಏರಿಕೆ ಆಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ ಅಲ್ಲ. ದೇಶದಲ್ಲಿಯೇ ಈಗ ಕೋವಿಡ್ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಇದೆ ಎಂದರು.
ಕೇಸ್ ಹಾಕುತ್ತಾರೆ ಎಂದೋ ಅಥವಾ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದೆ ಎಂದೋ ಪಾದಯಾತ್ರೆ ಹಿಂಪಡೆದಿಲ್ಲ. ಜನರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಇನ್ನು ಎರಡು ದಿನದಲ್ಲಿ ಬೆಂಗಳೂರಿಗೆ ಹೋಗಬೇಕಿತ್ತು. ಇದೇ ಜ.19 ರಂದು ಸಮಾವೇಶ ನಡೆಸಲು ನಿರ್ಧರಿಸಿದ್ದೆವು. ಈಗ ತಾತ್ಕಾಲಿಕವಾಗಿ ಪಾದಯಾತ್ರೆ ಸ್ಥಗಿತಗೊಳಿಸಿದ್ದೇವೆ. ಮೂರನೇ ಅಲೆ ಕಡಿಮೆ ಆಗಿ, ನಿಯಮಾವಳಿ ಸಡಿಲ ಆದ ಮೇಲೆ ರಾಮನಗರದಿಂದ ಬೆಂಗಳೂರುವರೆಗೆ ಉಳಿದ ಏಳು ದಿನದ ಪಾದಯಾತ್ರೆ ಮುಂದುವರಿಯಲಿದೆ. ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳಬೇಡಿ. ಮತ್ತೆ ಪಾದಯಾತ್ರೆ ಮಾಡುತ್ತೇವೆ. ಆಗಲೂ ಎಂದಿನಂತೆ ನಿಮ್ಮ ಸಹಕಾರ ಬೇಕು ಸಿದ್ದರಾಮಯ್ಯ ಹೇಳಿದರು.