More

    ನನ್ನ ಬೈಯೋಕ್ಕೆ ಆಗಲ್ಲ, ಟ್ರೋಲ್​ ಮಾಡಿ ಖುಷಿಪಡ್ತಿದ್ದಾರೆ.. ಅವರಿಗೆ ನಾನೇ ಟಾರ್ಗೆಟ್ ಎನ್ನುತ್ತಲೇ ಮಹತ್ತರ ವಿಷ್ಯ ಬಿಚ್ಚಿಟ್ಟ ಡಿಕೆಶಿ

    | ಗಂಗಾಧರ್​ ಬೈರಾಪಟ್ಟಣ ರಾಮನಗರ
    ಕರೊನಾ ಆರ್ಭಟದ ನಡುವೆ ಮೇಕೆದಾಟು ಪಾದಯಾತ್ರೆ ಮೂಲಕ ರಾಜ್ಯ ರಾಜಕಾರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹೆಚ್ಚು ಸುದ್ದಿಯಲ್ಲಿದ್ದಾರೆ. ಪಾದಯಾತ್ರೆ ಕಟ್ಟಿಹಾಕುವ ಯತ್ನ ಸರ್ಕಾರದ್ದಾದರೆ, ಮಾಡಿಯೇ ತೀರುವ ಹಠ ಶಿವಕುಮಾರ್​ ಅವರದ್ದು. ಪಾದಯಾತ್ರೆ ಹಿಂದೆ ಮತಬ್ಯಾಂಕ್​ ಸೆಳೆಯುವ ಕಾರ್ಯತಂತ್ರವೂ ಇದೆ. ಇದರ ನಡುವೆ ಪಾದಯಾತ್ರೆ ಆರಂಭದಿಂದಲೂ ಡಿಕೆಶಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಈ ಬಗ್ಗೆ ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಶಿವಕುಮಾರ್​ ಎಲ್ಲದಕ್ಕೂ ಬಹಳ ಶಾಂತವಾಗಿಯೇ ಉತ್ತರಿಸಿದರು. ತಮ್ಮ ಅವಧಿಯ ಜಲ ಸಂಪನ್ಮೂಲ ಇಲಾಖೆ ತನಿಖೆಯನ್ನು ನಡೆಸುವಂತೆ ಸರ್ಕಾರಕ್ಕೆ ಪಂಥಾಹ್ವಾನ ನೀಡಿದರು. ಡಿಕೆಶಿ ಜತೆಗಿನ ಮಾತುಕತೆಯ ಪೂರ್ಣ ಪಾಠ ಇಲ್ಲಿದೆ.

    * ನೀರಿಗಾಗಿ ಪಾದಯಾತ್ರೇನಾ? ಮತಬ್ಯಾಂಕ್​ ಯಾತ್ರೇನಾ?
    ಡಿಕೆಶಿ: ರಾಜ್ಯದ ಜನ ಈಗಾಗಲೇ ಕಾಂಗ್ರೆಸ್​ ಕಡೆಗೆ ಬರುತ್ತಿದ್ದಾರೆ. ಮತಬ್ಯಾಂಕ್​ಗಾಗಿ ರಾಜಕಾರಣ ಮಾಡುವ ಅಗತ್ಯ ನಮಗಿಲ್ಲ. ನಮ್ಮ ಭಾಗದ ಜನ ನೀರಿಗಾಗಿ ಪರಿತಪಿಸುತ್ತಿರುವಾಗ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಮ್ಮ ಕೆಲಸ ಮಾಡುತ್ತಿದ್ದೇವೆ. ಇದು ನೀರಿಗಾಗಿ ನಡೆಸುತ್ತಿರುವ ಹೋರಾಟ.

    * ಪಾದಯಾತ್ರೆಗೆ ಜನ ಬೆಂಬಲ ಹೇಗಿದೆ?
    ಡಿಕೆಶಿ: ನಿಜಕ್ಕೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಹೋರಾಟಕ್ಕೆ ಜನರು ತೋರುತ್ತಿರುವ ಪ್ರೀತಿಗೆ ಚಿರಋಣಿ.

    * ನಿಮ್ಮ ಪಾದಯಾತ್ರೆಗೆ ಬಿಜೆಪಿ ಸರ್ಕಾರ ಬಗ್ಗುವ ವಿಶ್ವಾಸವಿದೆಯೇ?
    ಡಿಕೆಶಿ: ಅವರು ಬಗ್ಗದಿದ್ದರೆ ಚಿಂತೆಯಿಲ್ಲ. ಮುಂದೆ ಅವರ ಸರ್ಕಾರ ಹೋಗಿ ನಮ್ಮ ಸರ್ಕಾರ ಬರುತ್ತದೆ. ಆಗ ನಾವೇ ಈ ಯೋಜನೆಯನ್ನು ಜಾರಿಗೆ ತರುತ್ತೇವೆ.

    * ಕೋವಿಡ್​ ನೆಪದಲ್ಲಿ ಬೆಂಗಳೂರು ಗಡಿಯಲ್ಲಿ ತಡೆದರೆ ಏನು ಮಾಡುತ್ತೀರಿ?
    ಡಿಕೆಶಿ: ಈಗಲೇ ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಇನ್ನು ಬೇಕಾದಷ್ಟು ಸಮಯವಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಹತ್ತಿಕ್ಕಲು ವಿರೋಧ ಪಗಳಿಗೆ ಇಷ್ಟೆಲ್ಲ ತೊಂದರೆ ಕೊಟ್ಟ ಸರ್ಕಾರವನ್ನು ಎಲ್ಲಿಯೂ ನೋಡಿಲ್ಲ. ಇಡೀ ಸರ್ಕಾರ ನಮ್ಮ ವಿರುದ್ಧ ನಿಂತಿದೆ. ಹಾಗೆಂದು ಪಾದಯಾತ್ರೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ.

    * ಸಿದ್ದರಾಮಯ್ಯ ಗೈರು ಪಾದಯಾತ್ರೆ ಮೇಲೆ ಪರಿಣಾಮ ಬೀರಿದೆಯೇ?
    ಡಿಕೆಶಿ: ಇದು ನನ್ನೊಬ್ಬನ ಹೋರಾಟವಲ್ಲ, ಕಾಂಗ್ರೆಸ್​ ಹೋರಾಟ, ಸಿದ್ದರಾಮಯ್ಯ ಅವರು ಅನಾರೋಗ್ಯದಿಂದ ಬಂದಿಲ್ಲ. ನಾನು ಪ್ರತಿ ಎರಡು-ಮೂರು ಗಂಟೆಗೊಮ್ಮೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಆರೋಗ್ಯ ವಿಚಾರಿಸುತ್ತಿದ್ದೇನೆ. ಶ್ರೀಘ್ರವೇ ಪಾದಯಾತ್ರೆಗೆ ಮರಳುತ್ತಾರೆ.

    * ಪಾದಯಾತ್ರೆಗೆ ರಾಷ್ಟ್ರೀಯ ನಾಯಕರು ಬರ್ತಾರಾ?
    ಡಿಕೆಶಿ: ಸದ್ಯ ಕೋವಿಡ್​ ಇದೆ ಎಂದು ಸರ್ಕಾರ ಬೊಬ್ಬೆ ಹೊಡೆಯುತ್ತಿದೆ. ಹೀಗಾಗಿ ಯಾರನ್ನೂ ನಾವು ಆಹ್ವಾನಿಸುತ್ತಿಲ್ಲ. ಆದರೆ ಅವರ ಮಾರ್ಗದರ್ಶನದಲ್ಲಿ ಪಾದಯಾತ್ರೆ ನಡೆಯುತ್ತಿದೆ.

    * ನೀವೇ (ಕಾಂಗ್ರೆಸ್​) ತಮಿಳುನಾಡಿನ ಡಿಎಂಕೆ ಸರ್ಕಾರದೊಂದಿಗೆ ಮಾತನಾಡಲಿ ಎನ್ನುತ್ತಿದೆಯಲ್ಲ ಬಿಜೆಪಿ?
    ಡಿಕೆಶಿ: ನಮ್ಮ ಕಡೆಗೆ ಬೊಟ್ಟು ಮಾಡುವ ಮೊದಲು, ಅವರ ಕೈಲಾದದ್ದನ್ನು ಮಾಡಲಿ, ರಾಜ್ಯ, ಕೇಂದ್ರ ಎರಡಲ್ಲೂ ಬಿಜೆಪಿ ಇದೆ. ಅಣೆಕಟ್ಟೆ ನಿರ್ಮಾಣಕ್ಕೆ ಅಗತ್ಯವಾದ ಹಸಿರು ನ್ಯಾಯಾಧೀಕರಣದ ಅನುಮತಿ ಕೊಡಿಸಲಿ. ಆಮೇಲೆ ನೋಡೋಣ. ಕರ್ನಾಟಕದ ಬಗ್ಗೆ ತಮಿಳುನಾಡು ಸರ್ಕಾರಗಳ ಧೋರಣೆ ವಿಚಿತ್ರವಾಗಿದೆ. ಇನ್ನು 20 ಸರ್ಕಾರಗಳು ಬಂದು ಹೋದರೂ ಅದು ಬದಲಾಗೊಲ್ಲ. ನಾನು ಅದರ ಬಗ್ಗೆ ಮಾತನಾಡಲ್ಲ.

    * ಮೇಕೆದಾಟು ಸತ್ಯ-ಮಿಥ್ಯದ ಜಾಹೀರಾತು ಸಮರದ ಬಗ್ಗೆ ಏನಂತೀರಿ?
    ಡಿಕೆಶಿ: ಬಿಜೆಪಿಯವರು ಬೇನಾಮಿ ಹೆಸರಿನಲ್ಲಿ ಸುಳ್ಳು ಮಾಹಿತಿಗಳ ಜಾಹೀರಾತು ಕೊಟ್ಟಿದ್ದರು. ನಾವು ಅದಕ್ಕೆ ಪ್ರತಿಯಾಗಿ ಸತ್ಯ ಸಂಗತಿಗಳನ್ನು ಜನರ ಮುಂದೆ ಇಟ್ಟಿದ್ದೇವೆ ಅಷ್ಟೇ.

    * ಪಾದಯಾತ್ರೆ ಮೂಲಕ ಹಳೇ ಮೈಸೂರು ಭಾಗದ ಒಕ್ಕಲಿಗರನ್ನು ಸೆಳೆಯುವ ಪ್ರಯತ್ನ ಡಿಕೆಶಿ ಅವರದ್ದು ಎನ್ನುತ್ತಾರಲ್ಲ?
    ಡಿಕೆಶಿ: ಒಕ್ಕಲಿಗರೂ ಸೇರಿದಂತೆ ಯಾರನ್ನೂ ನಾನು ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ. ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಹಿತವಾದ ಕೆಲಸ ಮಾಡಬೇಕು ಎಂಬುದಷ್ಟೇ ನಮ್ಮ ಉದ್ದೇಶ.

    * ಪಾದಯಾತ್ರೆಯಲ್ಲಿ ಬಳಲಿದಂತೆ ಕಂಡಿದ್ದೀರಿ. ಈಗ ಆರೋಗ್ಯ ಹೇಗಿದೆ?
    ಡಿಕೆಶಿ: ಐ ಆ್ಯಮ್​ ಟೋಟಲಿ ಫಿಟ್​ ಆ್ಯಂಡ್​ ಫೈನ್​. ಪಾದಯಾತ್ರೆಯನ್ನು ಹನ್ನೊಂದು ದಿನವೂ ಮಾಡುತ್ತೇನೆ. ಇದರಲ್ಲಿ ಸಂಶಯವೇ ಬೇಡ.

    * ಜಲಸಂಪನ್ಮೂಲ ಸಚಿವರಾಗಿದ್ದಾಗ ಮೇಕೆದಾಟು ಬಗ್ಗೆ ಏನನ್ನೂ ಮಾಡಿಲ್ಲ, ಈಗ ತಮ್ಮ ವೈಫಲ್ಯವನ್ನು ಮುಚ್ಚಿಟ್ಟು ಪಾದಯಾತ್ರೆ ಮಾಡ್ತಿದ್ದಾರೆ ಅಂತಿದೆಯಲ್ಲಾ ಬಿಜೆಪಿ?
    ಡಿಕೆಶಿ: ಈ ಬಗ್ಗೆ ಮೊದಲು ತನಿಖೆ ಮಾಡಲಿ. ನನ್ನದೇನಾದರೂ ತಪ್ಪಾಗಿದ್ದರೆ ಜೈಲಿಗೆ ಹಾಕಲಿ.

    * ಬಿಜೆಪಿ ಸರ್ಕಾರಕ್ಕೆ ಡಿಕೆಶಿ ಟಾರ್ಗೆಟ್​ ಆಗಿದ್ದಾರಾ? ಕಾನೂನು ಹೋರಾಟ ಮಾಡ್ತೀರಾ?
    ಡಿಕೆಶಿ: ಅವರಿರುವುದೇ ನನ್ನನ್ನು ಟಾರ್ಗೆಟ್​ ಮಾಡೋಕೆ? ಪ್ರತಿ ವಿಚಾರದಲ್ಲೂ ನನ್ನನ್ನು ಮತ್ತು ಕಾಂಗ್ರೆಸ್​ ಪಕ್ಷವನ್ನು ಟಾರ್ಗೆಟ್​ ಮಾಡುತ್ತಿದೆ. ಅವರ ಪಕ್ಷದ ನಾಯಕರು ಮಾಡುವ ಕಾರ್ಯಕ್ರಮಗಳಿಗೆ ಕೋವಿಡ್​ ನಿಯಮ ಅಪ್ಲೆ ಆಗೋಲ್ಲಾ. ನಾವು ಮಾಡಿದರೆ ಕೇಸ್​ ಹಾಕುತ್ತಾರೆ. ಇದು ಯಾವ ನ್ಯಾಯ? ಪಾದಯಾತ್ರೆ ಮುಗಿದ ನಂತರ ಬೈಠಕ್​ ನಡೆಸಿ, ಕಾನೂನು ಹೋರಾಟದ ಚಿಂತನೆ ಮಾಡುತ್ತೇವೆ.

    * ನೀವು ಟ್ರೋಲ್​ ಆಗುತ್ತಿದ್ದೀರಿ? ಇದಕ್ಕೆ ನಿಮ್ಮ ಪ್ರತಿಕ್ರಿಯೆ?
    ಡಿಕೆಶಿ: ನನ್ನ ಬೈಯೋಕ್ಕೆ ಆಗಲ್ಲ, ಟ್ರೋಲ್​ ಮಾಡಿ ಖುಷಿಪಡುತ್ತಿದ್ದಾರೆ, ಪಡಲಿ. ಅವರದ್ದೇ ಬೇರೆ ಬೇರೆ ಸ್ಕಾಂಡಲ್​ ನಡೀತಲ್ಲ, ಗೋಮಟೇಶ್ವರನ ಕಥೆಗಳು ಇದ್ವಲ್ಲ, ಅವುಗಳನ್ನು ಟ್ರೋಲ್​ ಮಾಡೋಕೆ ಅವರಿಗೆ ಆಗಲಿಲ್ಲ. ಅದನ್ನು ಟ್ರೋಲ್​ ಮಾಡ್ತಾರಾ?

    ಬರೋಬ್ಬರಿ 6 ಅಡಿ ಮೇಲೆದ್ದ ಡುಪ್ಲೆಕ್ಸ್​ ಮನೆ! ಶಿವಮೊಗ್ಗದಲ್ಲಿ 150 ಜಾಕ್​ ಬಳಸಿ ಬಿಹಾರಿ ಕಾರ್ಮಿಕರ ಮ್ಯಾಜಿಕ್​

    ಬೆಡ್​ ರೂಂನಲ್ಲಿ 15 ಅಡಿ ಗುಂಡಿ ತೋಡಿದ ಯುವಕ! ಪೊಲೀಸರು ಹೋಗದಿದ್ದಲ್ಲಿ ನಡೆಯುತ್ತಿತ್ತು ಮಹಾ ದುರಂತ

    ಲೈಂಗಿಕತೆಗಾಗಿ ಪತ್ನಿಯರ ವಿನಿಮಯ! ಟೆಲಿಗ್ರಾಂ, ಮೆಸೆಂಜರ್​ ಗ್ರೂಪ್​ನಲ್ಲೇ ವ್ಯವಹಾರ… ಅಸಹ್ಯ ಹುಟ್ಟಿಸುತ್ತೆ ಇವರ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts