

ಗೋಕರ್ಣ: ಗೋಕರ್ಣದಲ್ಲಿ ಮಹಾಶಿವರಾತ್ರಿ ಸಂಭ್ರಮ ಕಳೆಗಟ್ಟಿದ್ದು, ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬಂದಿದೆ. ಆದರೆ, ಪ್ರತಿ ಶಿವರಾತ್ರಿಯಂದು ಗೋಕರ್ಣಕ್ಕೆ ಬಂದು ಆತ್ಮಲಿಂಗಕ್ಕೆ ಅಭಿಷೇಕ ಪೂಜಾದಿಗಳನ್ನು ಕೈಗೊಳ್ಳುತ್ತಿದ್ದ ಭಕ್ತರಿಗೆ ಈ ಬಾರಿ ನಿರಾಶೆಯಾಗಲಿದೆ.
ಸವೋರ್ಚ್ಛ ನ್ಯಾಯಾಲಯ ರಚಿಸಿದ ಮೇಲುಸ್ತುವಾರಿ ಸಮಿತಿಯು ಭಕ್ತಾದಿಗಳಿಗೆ ಗರ್ಭಗುಡಿ ಪ್ರವೇಶ ಮತ್ತು ಆತ್ಮಲಿಂಗ ದರ್ಶನಕ್ಕೆ ಮಾತ್ರ ಆಸ್ಪದ ನೀಡಿದೆ. ವೈದಿಕ ಉಪಾಧಿವಂತರ ನೇತೃತ್ವದಲ್ಲಿ ಮಂದಿರದಲ್ಲಿ ಭಕ್ತರು ಕೈಗೊಳ್ಳುತ್ತಿದ್ದ ಎಲ್ಲ ವಿಶೇಷ ಪೂಜಾಭಿಷೇಕಗಳಿಗೆ ಕಳೆದ ವರ್ಷದ ಮೇ ತಿಂಗಳಿನಿಂದ ಸಂಪೂರ್ಣ ಬ್ರೇಕ್ ಹಾಕಿದೆ. ಸಮಿತಿಯಲ್ಲಿರುವ ಸ್ಥಳಿಯ ಉಪಾಧಿವಂತರು ಭಕ್ತಾದಿಗಳಿಗೆ ಪೂಜೆಗೆ ಅನುವು ಮಾಡಿಕೊಡುವ ಒಲವು ಹೊಂದಿದ್ದರೂ ಅದು ಜಾರಿಗೆ ಬರಲು ಸಾಧ್ಯವಾಗಿಲ್ಲ. ಆತ್ಮಲಿಂಗ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.