ಕೋಲಾರದಲ್ಲಿ ಶೋಕದ ಛಾಯೆ

klrs mdrs
ಪ್ರವಾಸಕ್ಕೆ ತೆರಳಿದ್ದ ಮಕ್ಕಳು ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಬುಧವಾರ ಬೆಳಗ್ಗೆ ಮಕ್ಕಳ ಪಾಲಕರು ಮುಳಬಾಗಿಲು ತಾಲೂಕು ಎಂ.ಕೊತ್ತೂರು ಮುರಾರ್ಜಿ ದೇಸಾಯಿ ಶಾಲೆಯ ಮುಂಭಾಗ ಮಕ್ಕಳನ್ನು ಕಾಣಲು ಕಾತುರದಿಂದ ಕಾಯುತ್ತಿದ್ದರು.
Published on

ಮುಳಬಾಗಿಲು: ತಾಲೂಕಿನ ಎಂ.ಕೊತ್ತೂರು ಮುರಾರ್ಜಿ ದೇಸಾಯಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಸಾವಿನಿಂದ ಕೋಲಾರ ಜಿಲ್ಲೆಯಲ್ಲಿ ಶೋಕದ ಛಾಯೆ ಆವರಿಸಿದೆ.

ಎಂ.ಕೊತ್ತೂರು ಮುರಾರ್ಜಿ ದೇಸಾಯಿ ಶಾಲೆಯ 9ನೇ ತರಗತಿಯ 27 ಬಾಲಕರು ಹಾಗೂ 19 ಬಾಲಕಿಯರು ಸೇರಿ ಒಟ್ಟು 46 ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು.

ಡಿ.8ರಂದು ಶಾಲೆಯಿಂದ ಹೊರಟು ಶಿರಸಿ ತಾಲೂಕಿನ ಬಸರಾಸಿಗೆ ಡಿ.9ರಂದು ಬೆಳಗ್ಗೆ 9.30ಕ್ಕೆ ತಲುಪಿದ್ದಾರೆ. ಡಿ.10ರಂದು ಮಧ್ಯಾಹ್ನ 1.30 ಮುರುಡೇಶ್ವರಕ್ಕೆ ಶಿಕ್ಷಕರೊಂದಿಗೆ ಆಗಮಿಸಿದ್ದ ಮಕ್ಕಳಲು ಕ್ಷೇತ್ರವನ್ನು ಕಣ್ತುಂಬಿಕೊAಡಿದ್ದರು. ಬಳಿಕ ಸಮುದ್ರದಲ್ಲಿ ಆಟವಾಡಲು ನೀರಿಗಿಳಿದ ವೇಳೆ 7 ವಿದ್ಯಾರ್ಥಿನಿಯರು ಕೊಚ್ಚಿ ಹೋಗಿದ್ದಾರೆ. ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ಯಶೋದಾ, ಲಿಪಿಕಾ, ವೀಕ್ಷಣಾ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದ್ದು, ಅವರ ಆರೋಗ್ಯ ಸುಧಾರಣೆಯಾಗಿದೆ. ಆದರೆ, ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ.

ಮುರುಡೇಶ್ವರದತ್ತ ಪಾಲಕರು:

ಮೃತಪಟ್ಟಿರುವ ವಿದ್ಯಾರ್ಥಿಗಳ ಮನೆಗಳಿಗೆ ತಹಸೀಲ್ದಾರ್ ಗೀತಾ, ಸಮಾಜ ಕಲ್ಯಾಣ ಇಲಾಖೆಯ ಅಽಕಾರಿಗಳು ತೆರಳಿ ಸಾಂತ್ವನ ಹೇಳಿದರು. ಹಾಗೆಯೇ, ಶಾಸಕ ಸಮೃದ್ಧಿ ಮಂಜುನಾಥ್ ಅವರು ಪಾಲಕರ ಜತೆಯಲ್ಲೇ ಮುರುಡೇಶ್ವರಕ್ಕೆ ಕರೆದುಕೊಂಡು ಹೋಗಿ ಮೃತ ದೇಹ ತರಲು ಮುಂದಾಗಿದ್ದು, ಜತೆಗೆ ಇನ್ನುಳಿದ ಮಕ್ಕಳನ್ನು ಸುರಕ್ಷಿತವಾಗಿ ಮುಳಬಾಗಿಲಿಗೆ ವಾಪಸ್ ಕಳುಹಿಸಲು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಿದರು. ಮಕ್ಕಳ ಪಾಲಕರು ಶಾಲೆ ಬಳಿ ಬಂದು ಪ್ರವಾಸಕ್ಕೆ ತೆರಳಿದ್ದ ಮಕ್ಕಳು ವಾಪಸ್ ಬರುವ ದಾರಿಯನ್ನೇ ಕಾತರದಿಂದ ಕಾಯುತ್ತಿದ್ದ ದೃಶ್ಯಗಳು ಎಲ್ಲರ ಮನ ಕಲುಕುತ್ತಿವಂತಿತ್ತು.

*ಮೃತ ದೇಹ ಪತ್ತೆ

ನೀರಿನಲ್ಲಿ ಕೊಚ್ಚಿಹೋಗಿದ್ದ ನಾಲ್ವರು ವಿದ್ಯಾರ್ಥಿನಿಯರ ಪೈಕಿ ವಿದ್ಯಾರ್ಥಿನಿ ಶ್ರಾವಂತಿ (15) ಶವ ಮಂಗಳವಾರವೇ ಪತ್ತೆಯಾಗಿತ್ತು. ಉಳಿದವರ ಪತ್ತೆಗೆ ಕರಾವಳಿ ಕಾವಲು ಪೊಲೀಸರ ಪಡೆ ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ ಬುಧವಾರ ಮುಂಜಾನೆಯಿಂದ ಮೃತದೇಹದ ಪತ್ತೆ ಕಾರ್ಯಾಚರಣೆ ನಡೆಸಲಾಯಿತು. ಬೆಳಗ್ಗೆ 11.30ಕ್ಕೆ ಇಬ್ಬರು ವಿದ್ಯಾರ್ಥಿನಿಯರ ಮೃತದೇಹ ಎನ್.ಎಸ್.ರೆಸಿಡೆನ್ಸಿ ಹಿಂಬದಿ ಕಲ್ಲು ಬಂಡೆ ಸಮೀಪ ಹಾಗೂ ಇನ್ನೋರ್ವ ವಿದ್ಯಾರ್ಥಿನಿ ಮೃತದೇಹ ಪಕ್ಕದ ಗುಡ್ಡದ ಕೆಳಗಡೆ ಪತ್ತೆಯಾಗಿದೆ.

ಇಂದು ಸಂಸ್ಕಾರ

ಮುಳಬಾಗಲು ತಾಲೂಕಿನ ಪೂಜಾರಹಳ್ಳಿಯ ಶ್ರಾವಂತಿ (15), ಗಡ್ಡೂರು ಗ್ರಾಮದ ದೀಕ್ಷಾ (15), ಹೆಬ್ಬಣಿ ಗ್ರಾಮದ ಲಾವಣ್ಯಾ (15) ಹಾಗೂ ದೊಡ್ಡಘಟ್ಟ ಗ್ರಾಮದ ವಂದನಾ (15) ಅವರ ಮೃತ ದೇಹಗಳು ಬುಧವಾರ ತಡರಾತ್ರಿ ಜಿಲ್ಲೆಗೆ ಆಗಮಿಸಲಿದ್ದು, ಜಿಲ್ಲಾಽಕಾರಿಗಳ ಕಚೇರಿ ಬಳಿ ಗುರುವಾರ ಬೆಳಗ್ಗೆ ೮ಗಂಟೆಗೆ ವಿದ್ಯಾರ್ಥಿನಿಯರ ಪಾರ್ಥಿವ ಶರೀರಗಳ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿದೆ. ನಂತರ ಅಂತ್ಯ ಸಂಸ್ಕಾರ ನಡೆಯಲಿದೆ.

* ನಿರ್ಲಕ್ಷ್ಯ ವಹಿಸಿರುವವರ ವಿರುದ್ಧ ದೂರು

ಮಕ್ಕಳು ಸಮುದ್ರದ ತೀರದಲ್ಲಿ ಆಟವಾಡಲು ಹೋಗುವಾಗ ಪ್ರಾಂಶುಪಾಲರು, ಶಿಕ್ಷಕರು ನಿರ್ಲಕ್ಷ್ಯ ತೋರಿದ್ದಾರೆ. ಸುರಕ್ಷಾ ಕವಚ, ಅಳವಡಿಸದೆ ಆಟವಾಡಲು ಬಿಟ್ಟಿರುವುದರಿಂದ ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ತೋರಿರುವ ಪ್ರಾಂಶುಪಾಲೆ ಶಶಿಕಲಾ (40), ಅತಿಥಿ ಶಿಕ್ಷಕರಾದ ಆರ್.ಸುನೀಲ್ (33), ಚೌಡಪ್ಪ (34), ಎಸ್.ವಿಶ್ವನಾಥ್ (೨೭), ಶಾರದಮ್ಮ (37), ಕೆ.ನರೇಶ (30) ವಿರುದ್ಧ ಸ್ಥಳೀಯ ಠಾಣೆಯಲ್ಲಿ ದಾಖಲಾಗಿದೆ.

* ಮಕ್ಕಳು ಮನೆಗೆ

ಸುದ್ದಿ ತಿಳಿಯುತ್ತಿದ್ದಂತೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ಜಮಾಯಿಸಿದ ಮಕ್ಕಳ ಪಾಲಕರು, ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಮಕ್ಕಳ ಜೀವವನ್ನೇ ತೆಗೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿ ತನಕ ಒಟ್ಟು 260 ಮಂದಿ ಮಕ್ಕಳಿದ್ದು, ಈ ಪೈಕಿ 9ನೇ ತರಗತಿಯ 45 ಜನ ಮಕ್ಕಳನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋಗಲಾಗಿದೆ. ಘಟನೆಯಿಂದ ಬೇರೆ ವಿದ್ಯಾರ್ಥಿಗಳ ಪಾಲಕರೂ ಆತಂಕಗೊಂಡಿದ್ದು, ಮಕ್ಕಳನ್ನು ವಸತಿ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದದ್ದು ಕಂಡುಬಂತು.

* ಸಂತೋಷಮ್ಮಗೆ ಹೆಚ್ಚುವರಿ ಪ್ರಭಾರ

ಮುಳಬಾಗಿಲು ತಾಲೂಕಿನ ಕುರುಡಮಲೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲೆ ಎನ್.ಸಂತೋಷಮ್ಮ ಅವರನ್ನು ಕೊತ್ತೂರು ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಹೆಚ್ಚುವರಿ ಪ್ರಭಾರ ವಹಿಸಿ ನಿಯೋಜಿಸಲಾಗಿದೆ.

ಕೋಟ್...

ಪ್ರವಾಸಕ್ಕೆ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಉಳಿದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಜಿಲ್ಲೆಗೆ ವಾಪಸ್ ಬಂದಿದ್ದಾರೆ. ಮೃತರ ಅಂತ್ಯಕ್ರಿಯೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷದಂತೆ ಒಟ್ಟು 20 ಲಕ್ಷ ರೂ. ಜಿಲ್ಲಾಡಳಿತ ಖಾತೆಗೆ ಬಂದಿದ್ದು, ಚೆಕ್ ವಿತರಣೆ ಮಾಡಲಾಗುವುದು.

| ಅಕ್ರಂಪಾಷಾ, ಡಿಸಿ, ಕೋಲಾರ

ಕೋಟ್...

ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಶಿಕ್ಷಕರು ಬೇಜವಾಬ್ದಾರಿತನ ತೋರಿದ್ದಾರೆ. ಎಚ್ಚರವಹಿಸಿದ್ದರೆ ಘಟನೆ ಸಂಭವಿಸುತ್ತಿರಲಿಲ್ಲ. ಈ ಘಟನೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಬೇಸರ ತಂದಿದೆ.

| ಮಮತಾ, ಪಾಲಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net