ಕೈ ನಾಯಕರ ಬಾಯಿಗೆ "ಹೈ" ಬೀಗ; ರಾಜ್ಯದ ಬೆಳವಣಿಗೆಗೆ ಗಂಭೀರ ಕಳವಳ!

Congress
Published on

ಬೆಂಗಳೂರು: ಸರ್ಕಾರದ ಆಗುಹೋಗುಗಳ ಬಗ್ಗೆ ಪಕ್ಷದ ನಾಯಕರು ಹಾಗೂ ಸಚಿವರೇ ಸಾರ್ವಜನಿಕವಾಗಿ ವಿಶ್ಲೇಷಣೆ, ವ್ಯಾಖ್ಯಾನ ಮಾಡುವುದರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ಅಸಮಾಧಾನಗೊಂಡಿದೆ. ‘ಯಾವುದೇ ಹೇಳಿಕೆಗಳು ಪಕ್ಷದ ಹಿತಾಸಕ್ತಿ ಮತ್ತು ಸರ್ಕಾರದ ಸುಗಮ ಕಾರ್ಯನಿರ್ವಹಣೆಗೆ ವಿರುದ್ಧ. ಇಂತಹ ಸಾರ್ವಜನಿಕ ಟೀಕೆಗಳು ಸ್ವೀಕಾರಾರ್ಹವಲ್ಲ ಮತ್ತು ಅನಗತ್ಯ. ಇದನ್ನು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಗಮನಿಸಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ರಾಜ್ಯದ ನಾಯಕರಿಗೆ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ಪಕ್ಷದ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಪ್ರಸ್ತಾಪದೇ ಗುರುತರ ಆಪಾದನೆ ಮಾಡಿದ್ದು ಸಂಚಲನ ಉಂಟು ಮಾಡಿತ್ತು. ಬಳಿಕ ಅವರಿಗೆ ಪಕ್ಷದ ಶಿಸ್ತು ಸಮಿತಿಯಿಂದ ನೋಟಿಸ್ ಜಾರಿಯಾಗಿತ್ತು. ಈ ಬೆಳವಣಿಗೆ ಮುಗಿತೆನ್ನುವುದರಲ್ಲೇ ಇನ್ನಷ್ಟು ಉಪ ಮುಖ್ಯಮಂತ್ರಿ ಹುದ್ದೆ ಬಗ್ಗೆ ಸಚಿವ ಕೆ.ಎನ್ ರಾಜಣ್ಣ ದನಿ ಎತ್ತಿದರು. ಈ ದನಿಗೆ ಏಳು ಸಚಿವರು ಪ್ರತಿಕ್ರಿಯೆ ನೀಡುವ ಮೂಲಕ ವಿಚಾರ ಹಿಗ್ಗಿಸಿದರು, ವ್ಯಾಖ್ಯಾನಿಸಿದರು. ಇದು ಸಹಜವಾಗು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ಗೆ ಮುಜುಗರ ಉಂಟುಮಾಡಿತು. ಡಿಸಿಎಂ ಸೃಷ್ಟಿಯಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಎಂಬ ಅಭಿಪ್ರಾಯಗಳು ಸಾಕಷ್ಟು ಚರ್ಚೆಯಾಯಿತು. ಇದು ವಿವಿಧ ಸಮುದಾಯಗಳ ಗಮನವನ್ನೂ ಸೆಳೆಯಿತು. ಹೀಗಾಗಿ ಪಕ್ಷದ ಮೇಲೂ ಪರೋಕ್ಷ ಒತ್ತಡ ಆರಂಭವಾಯಿತು. ಹೀಗಾಗಿ ಈ ಬೆಳವಣಿಗೆಗೆ ಬ್ರೇಕ್ ಹಾಕಲು ಹೈಕಮಾಂಡ್ ಬಯಸಿ ಭಾನುವಾರ ತನ್ನ ಸಂದೇಶ ಕಳಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಕೆಸಿವೇ ಎಚ್ಚರಿಕೆ

ಮಹಿಳೆಯರು, ಬಡವರು ಮತ್ತು ಸಾಮಾನ್ಯ ಜನರಿಗೆ ಕಾಂಗ್ರೆಸ್ ನೀಡಿದ್ದ ಭರವಸೆಗಳ ಪೈಕಿ ನಾಲ್ಕನ್ನು ಅನುಷ್ಠಾನ ಮಾಡುವಲ್ಲಿ ಸರ್ಕಾರ ಉತ್ತಮ ಕೆಲಸ ಮಾಡಿದೆ, ‘ಕರ್ನಾಟಕ ಮಾದರಿ’ ಬಗ್ಗೆ ಈಗ ದೇಶಾದ್ಯಂತ ಚರ್ಚೆಯಾಗುತ್ತಿದೆ, ಹಲವು ರಾಜ್ಯ ಅನುಕರಿಸುತ್ತಿದೆ. ಈ ಕಲ್ಯಾಣ ಕಾರ್ಯಕ್ರಮ ಯಶಸ್ಸು ಬಿಜೆಪಿ ಮತ್ತು ಇತರ ಪ್ರಾದೇಶಿಕ ಪಕ್ಷಗಳನ್ನು ತಲ್ಲಣಗೊಳಿಸಿದೆ ಮತ್ತು ಆ ಪಕ್ಷಗಳಿಗೆ ಹಿತಕರವಾಗಿಲ್ಲ ಎಂದು ಕೆ.ಸಿ ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಆ ಪಕ್ಷಗಳು ಜನರ ಗಮನ ಬೇರೆಡೆ ಸೆಳೆಯುವ ಮತ್ತು ಕೆರಳಿಸುವ ತಂತ್ರಗಾರಿಕೆ ಭಾಗವಾಗಿ ಈಗ ಮುಖ್ಯಮಂತ್ರಿ ಹುದ್ದೆ ಮತ್ತು ಉಪಮುಖ್ಯಮಂತ್ರಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಅನಗತ್ಯವಾದ ವದಂತಿಗಳನ್ನು ಉತ್ತೇಜಿಸಲು ಕೆಲವು ಮಾಧ್ಯಮವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಲವು ಕಾಂಗ್ರೆಸ್ ನಾಯಕರು ಮತ್ತು ಮಂತ್ರಿಗಳು ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ಬಲೆಗೆ ಬಲಿಯಾಗುವ ಮೂಲಕ ವದಂತಿಗಳ ಬಗ್ಗೆ ಪ್ರತಿಕ್ರಿಯಿಸುತ್ತಿರುವುದು ಕಳವಳಕಾರಿ, ಇದನ್ನು ನಾವು ಗಂಭೀರವಾಗಿ ಗಮನಿಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.

ಕರ್ನಾಟಕ ಮಾದರಿ ಬಗ್ಗೆ ಸಂಪೂರ್ಣ ಒಗ್ಗಟ್ಟಾಗಿರುವುದು ಮತ್ತು ಒಟ್ಟಾಗಿರುವುದು ಅತ್ಯವಾಗಿದೆ ಎಂದು ನಾವು ಸ್ಪಷ್ಟವಾಗಿ ಪುನರುಚ್ಚರಿಸಲು ಬಯಸುತ್ತೇವೆ ಎಂದು ವೇಣುಗೋಪಾಲ್ ಖಡಕ್ ಸೂಚನೆ ನೀಡಿದ್ದಾರೆ. ಹಾಗೆಯೇ, ಭರವಸೆಗಳನ್ನು ನಿರಂತರವಾಗಿ ಅನುಷ್ಠಾನಗೊಳಿಸುವ ಗುರಿಗೆ ಸಮರ್ಪಣಾ ಮನೋಭಾವ ಹೊಂದಿರಬೇಕು, ಪಕ್ಷದ ನಾಯಕರು ಸಾರ್ವಜನಿಕವಾಗಿ ಮಾಡುವ ದ್ವಂದ್ವ ಅಥವಾ ಗೊಂದಲಮಯ ಹೇಳಿಕೆಗಳು ಪಕ್ಷದ ಯಶಸ್ಸು, ಶಿಸ್ತು ಮತ್ತು ಒಗ್ಗಟ್ಟಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಕ್ಷ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಪಕ್ಷದ ವೇದಿಕೆಯಲ್ಲಿಯೇ ಪ್ರಸ್ತಾಪಿಸಬೇಕೆಂದು ಪಕ್ಷದ ಎಲ್ಲಾ ನಾಯಕರಲ್ಲಿ ಕೋರುತ್ತೇನೆ. ಯಾವುದೇ ಕಾರಣಕ್ಕೆ ಅಭಿಪ್ರಾಯ ಸಾರ್ವಜನಿಕವಾಗಿ ಹೊರಹಾಕಬಾರದು. ಯಾವುದೇ ಹೇಳಿಕೆಗಳು ಪಕ್ಷದ ಹಿತಾಸಕ್ತಿ ಮತ್ತು ಸರ್ಕಾರದ ಸುಗಮ ಕಾರ್ಯನಿರ್ವಹಣೆಗೆ ವಿರುದ್ಧವಾಗಿದ್ದರೆ ಅಂತಹವು ಸ್ವೀಕಾರಾರ್ಹವಲ್ಲ ಎಂದು ಹೇಳುವ ಮೂಲಕ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಕೈ ಸುಟ್ಟಿದ್ದ ಖಾಕಿ ಚಡ್ಡಿ

‘ಹಿಂದಿನ ಯಾವ ಮುಖ್ಯಮಂತ್ರಿಗಳು ಜಾತಿ ರಾಜಕಾರಣ ಮಾಡಲಿಲ್ಲ. ಪಂಚೆ ಹಾಕಿಕೊಂಡು ವಾಚ್ ಕಟ್ಟಿಕೊಂಡು ಒಳಗಡೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಎಂದು ಹೇಳಿದರೆ ಆಗೋದಿಲ್ಲ’ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ ಹರಿಪ್ರಸಾದ್ ತಮ್ಮೊಳಗಿನ ಆಕ್ರೋಶ ಹೊರಹಾಕಿದ್ದರು. ‘ನನ್ನನ್ನ ಮಂತ್ರಿ ಮಾಡದೆ ಇರುವುದಕ್ಕೆ ಸಿಎಂಗೆ ಧನ್ಯವಾದ ತಿಳಿಸುತ್ತೇನೆ. ಸಮುದಾಯದ ಯಾರೂ ನಾನು ಸಚಿವನಾಗುತ್ತೇನೆ ಅಂದುಕೊಳ್ಳಬೇಡಿ. ಓಟ್ ಹಾಕೋಕೆ ನೀವು, ನೋಟ್ ಕೊಡೋದು ನೀವು. ಆದರೆ ರಾಜ್ಯಭಾರ ಮಾಡೋರು ಬೇರೆಯವರು’ ಎಂದು ಹರಿಪ್ರಸಾದ್ ಗುಡುಗಿದ್ದರು.

ಸಚಿವರು ರಾಜಣ್ಣ ಅವರು ಸಮುದಾಯವಾರು ಡಿಸಿಎಂ ಸೃಷ್ಟಿಸಬೇಕೆಂದು ವಾದ ಮುಂದಿಟ್ಟಿದ್ದರು. ಗೃಹ ಸಚಿವ ಜಿ. ಪರಮೇಶ್ವರ ಹೈಕಮಾಂಡ್ ಬಳಿಯೇ ಈ ಬಗ್ಗೆ ಮಾತನಾಡುವುದಾಗಿ ಹೇಳಿದ್ದರು. ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ನಾಗೇಂದ್ರ, ಮುನಿಯಪ್ಪ ಕೂಡ ಚರ್ಚೆಗೆ ಕಾವು ತಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net