ಪ್ರವಾಸಿಗರಿಗೆ ಸರಣಿ ರಜೆಯ ಮಜಾ

tourist
ಮುಳ್ಳಯ್ಯನಗಿರಿ ಏರುತ್ತಿರುವ ಪ್ರವಾಸಿಗರು.
Published on

ಚಿಕ್ಕಮಗಳೂರು: ಸಾಲು ಸಾಲು ರಜೆ ಇರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ತಂಡೋಪತಂಡವಾಗಿ ಬಂದಿದ್ದಾರೆ. ಇದರಿಂದ ನಗರ ಸೇರಿ ಗ್ರಾಮೀಣ ಭಾಗದ ಬಹುತೇಕ ರೆಸಾರ್ಟ್‌ಗಳು, ಹೋಂ ಸ್ಟೇಗಳು, ಹೋಟೆಲ್‌ಗಳು ಭರ್ತಿಯಾಗಿವೆ. ಮುಖ್ಯವಾಗಿ ಟ್ಯಾಕ್ಸಿ ಚಾಲಕರು, ಪ್ರವಾಸಿಗರನ್ನೇ ನಂಬಿಕೊಂಡಿರುವ ವ್ಯಾಪಾರಿಗಳಲ್ಲಿ ಸಂತಸ ಮನೆಮಾಡಿದೆ.

ಎರಡನೇ ಶನಿವಾರ, ಭಾನುವಾರ ಹಾಗೂ ಸ್ವಾತಂತ್ರ್ಯೋತ್ಸವದ ನಿಮಿತ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸಿದ್ದಾರೆ. ಮಳೆ ಕಡಿಮೆ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರವಾಸಕ್ಕೆ ಬಂದಿದ್ದಾರೆ. ಬಹಳಷ್ಟು ಮಂದಿಗೆ ರೂಂ ಸಿಗದೆ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಮತ್ತೆ ಕೆಲವರು ಬೇರೆ ಜಿಲ್ಲೆ ಹಾಗೂ ತಾಲೂಕುಗಳಿಗೆ ತೆರಳಿ ರೂಂ ಮಾಡಿಕೊಂಡಿದ್ದಾರೆ. ರೂಂ ಸಿಗದೆ ಕೆಲವರು ಕಾರಿನಲ್ಲೆ ಕಾಲ ಕಳೆದಿದ್ದಾರೆ.
ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಮುತ್ತೋಡಿ ಅರಣ್ಯ, ದೇವರಮನೆ ಬೆಟ್ಟ, ದತ್ತಪೀಠ, ಕಲ್ಲತ್ತಿಗಿರಿ, ಝರಿ ಫಾಲ್ಸ್, ಶೃಂಗೇರಿ ಶಾರಂದಾಂಬೆ, ಕಳಸ, ಹೊರನಾಡು ದೇಗುಲಗಳು, ಚಾರ್ಮಾಡಿ ಘಾಟ್ ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಜಿಲ್ಲೆಯಲ್ಲಿ 400ಕ್ಕೂ ರೆಸಾರ್ಟ್‌ಗಳು, 1500ಕ್ಕೂ ಹೋಂ ಸ್ಟೇಗಳು ಇವೆ. ಆದರೆ ಯಾವೊಂದರಲ್ಲೂ ರೂಂಗಳು ಖಾಲಿ ಇಲ್ಲ. ಸರಣಿ ರಜೆಯಿದ್ದ ಕಾರಣದಿಂದಾಗಿ ಮಾಲೀಕರು ಆನ್‌ಲೈನ್ ಬುಕಿಂಗ್ ಹಾಗೂ ನೇರ ಬುಕಿಂಗ್ ವ್ಯವಸ್ಥೆ ಮಾಡಿದ್ದಾರೆ. ರೂಂಗಳಿಗೆ ಭಾರಿ ಬೇಡಿಕೆ ಇರುವುದರಿಂದ ಸಾಮಾನ್ಯ ದಿನಗಳಿಗಿಂತ ಹೆಚ್ಚು ದರ ನಿಗದಿಪಡಿಸಲಾಗಿದೆ. ಇದರಿಂದಾಗಿ ಪ್ರವಾಸಿಗರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಸಾಲು ರಜೆ ಇರುವುದರಿಂದ ವಾರದ ದಿನಗಳಲ್ಲೇ ರೂಂಗಳು ಬುಕ್ ಆಗಿವೆ. ಇದರ ಜತೆಗೆ ನೇರವಾಗಿಯೂ ರೂಂ ಬುಕಿಂಗ್‌ಗಾಗಿ ಹೋಟೆಲ್‌ಗೆ ಬರುತ್ತಿದ್ದಾರೆ. ಜಿಲ್ಲಾಡಳಿತ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ ತೆರವು ಮಾಡಿದ್ದರಿಂದ ಈ ವಾರದಲ್ಲಿ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ರೆಸಾರ್ಟ್ ಮಾಲೀಕ ಅರುಣ್.
ಚಿಕ್ಕಮಗಳೂರು ಜಿಲ್ಲೆಯ ಪ್ರಕೃತಿಕ ಪ್ರವಾಸಿ ಸ್ಥಳಗಳನ್ನು ನೋಡಿದರೆ ಮನಸ್ಸಿಗೆ ಉಲ್ಲಾಸವಾಗುತ್ತದೆ ಎಂಬ ಮಾತಿದೆ. ರಜೆಗಳು ಸಿಕ್ಕಿರುವುದರಿಂದ ಜಿಲ್ಲೆಯ ಪ್ರವಾಸ ಕೈಗೊಂಡಿದ್ದು, ಶನಿವಾರ ಕೆಲ ಸ್ಥಳಗಳಿಗೆ ಹೋಗಿದ್ದೆವು. ಮುಳ್ಳಯ್ಯನಗಿರಿ ಭಾಗ ನೋಡಿಕೊಂಡು ಕುದುರೆಮುಖ, ಶೃಂಗೇರಿ, ಹೊರನಾಡು ದೇವಾಲಯಗಳಲ್ಲಿ ದರ್ಶನ ಪಡೆದು ವಾಪಸ್ ಊರಿಗೆ ಹೋಗುತ್ತೇವೆ ಎಂಬುದು ಬೆಂಗಳೂರಿನ ಪ್ರವಾಸಿಗ ಚಂದ್ರಶೇಖರ್ ಎಂಬುವರ ಹೇಳಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net