

ಬೆಂಗಳೂರು: ಹೊಸೂರು ಮುಖ್ಯರಸ್ತೆ ಬಳಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯು ಘಟನೆಗೂ ಮುನ್ನ ಪಾನಮತ್ತರಾಗಿ ಕಾರು ಚಲಾಯಿಸಿ ಸರಣಿ ಅಪಘಾತ ಮಾಡಿದ್ದು, ಈ ಸಂಬಂಧ ಆಡುಗೋಡಿ ಸಂಚಾರ ಠಾಣೆ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆ.೧೭ ರಾತ್ರಿ ಸ್ನೇಹಿತನ ಜತೆ ಕೋರಮಂಗಲದ ಪಬ್‌ನಲ್ಲಿ ಪಾರ್ಟಿ ಮಾಡಿದ್ದ ಯುವತಿ ಮದ್ಯ ಸೇವಿಸಿದಿದ್ದರು ಎನ್ನಲಾಗಿದೆ. ನಂತರ ಮದ್ಯದ ನಶೆಯಲ್ಲಿ ಸ್ನೇಹಿತನ ಕಾರು ಚಾಲನೆ ಮಾಡಿಕೊಂಡು ಬಂದು ಕೋರಮಂಗಲ ೮೦ ಅಡಿ ರಸ್ತೆಯ ಮಂಗಳಾ ಜಂಕ್ಷನ್‌ನಲ್ಲಿ ಎರಡು ಆಟೋ ಹಾಗೂ ಕಾರಿಗೆ ವಾಹನ ಗುದ್ದಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ನಂತರ ಯುವತಿ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದರು. ಆದರೆ, ಆಟೋ ಚಾಲಕರು ಯುವತಿಯ ಕಾರನ್ನು ಹಿಂಬಾಲಿಸಿ ೆರಂ ಮಾಲ್ ಜಂಕ್ಷನ್‌ನಲ್ಲಿ ಅಡ್ಡಗಟ್ಟಿದ್ದರು. ಬಳಿಕ ಚಾಲಕರು ಜಖಂಗೊಂಡಿದ್ದ ಆಟೋಗಳನ್ನು ರಿಪೇರಿ ಮಾಡಿಸಿಕೊಡುವಂತೆ ಯುವತಿ ಮತ್ತು ಆಕೆಯ ಸ್ನೇಹಿತನನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಗಾಬರಿಯಾದ ಇಬ್ಬರು ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದರು.
ಯುವತಿಯು ಸ್ಥಳದಿಂದ ಪರಾರಿಯಾಗುವ ಯತ್ನದಲ್ಲಿ ಅದೇ ಮಾರ್ಗವಾಗಿ ಬಂದ ಅಪರಿಚಿತನ ಬೈಕ್‌ಗೆ ಹತ್ತಿಕೊಂಡು ಹೋಗಿದ್ದರು. ನಂತರ ಆ ಬೈಕ್‌ನಿಂದ ಇಳಿದು ಮತ್ತೊಬ್ಬ ದ್ವಿಚಕ್ರ ವಾಹನ ಸವಾರನಿಂದ ಡ್ರಾಪ್ ತೆಗೆದುಕೊಂಡಿದ್ದರು. ಆ ದ್ವಿಚಕ್ರ ವಾಹನ ಸವಾರ ಯುವತಿಯನ್ನು ಹೊಸೂರು ಮುಖ್ಯರಸ್ತೆ ಬಳಿಯ ನಿರ್ಜನ ಪ್ರದೇಶದ ಲಾರಿ ಸ್ಟ್ಯಾಂಡ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಈ ಪ್ರಕರಣ ಸಂಬಂಧ ಆರೋಪಿ ಮುಖೇಶ್‌ನನ್ನು ಎಸ್‌ಎಸ್‌ಆರ್ ಲೇಔಟ್ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅಪಘಾತದ ಸಂಬಂಧ ಆಟೋ ಚಾಲಕ ಅಜಾಜ್ ಅವರು ದೂರು ನೀಡಿದ್ದು, ಯುವತಿ ವಿರುದ್ಧ ಅಜಾಗರೂಕ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಚೇತರಿಸಿಕೊಳ್ಳುತ್ತಿದ್ದಂತೆಯೆ ಪ್ರಕರಣದ ಸಂಬಂಧ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.