

ಕಿರುವಾರ ಎಸ್.ಸುದರ್ಶನ್ ಕೋಲಾರ
ಕೋಲಾರ ಎಂಸಿಎಂಸಿ ಮಾರುಕಟ್ಟೆಗೆ ಹೆಚ್ಚುವರಿ ಜಾಗ ಕಲ್ಪಿಸಬೇಕು ಎಂದು ರೈತರು, ವ್ಯಾಪಾರಸ್ಥರು ಸರ್ಕಾರ, ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿರುವ ಬೆನ್ನಲ್ಲೇ ಹೂವು ಮಾರುಕಟ್ಟೆಗೆ ಪ್ರತ್ಯೇಕ ಜಾಗ ಕಲ್ಪಿಸಬೇಕು ಎಂಬ ಕೂಗು ಎದ್ದಿದೆ.
ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ಹೂವು ಬೆಳೆಗಾರರಿದ್ದಾರೆ. ಕೋಲಾರ ನಗರದ ಹಳೇ ಬಸ್ನಿಲ್ದಾಣದಲ್ಲಿ ಹೂವಿನ ವಹಿವಾಟು ನಡೆಯುತ್ತಿದ್ದು, ಜಾಗ ಕಿರಿದಾಗಿದೆ. ಇದರಿಂದಾಗಿ ರೈತರು ಹೂವನ್ನು ವಾಹನಗಳಲ್ಲಿ ತಂದು ಮಾರಾಟ ಮಾಡುವುದು ದೊಡ್ಡ ಸವಾಲಾಗಿದೆ. ಟೆಂಪೋ, ಗೂಡ್ಸ್ ಆಟೋ, ದ್ವಿಚಕ್ರವಾಹನದಲ್ಲಿ ಹೂವು ತರುತ್ತಾರೆ. ಜಾಗ ಕಿರಿದಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.
ಹಳೇ ಬಸ್ ನಿಲ್ದಾಣದಲ್ಲಿರುವ ಹೂವು ಮಳಿಗೆಗಳ ಎದುರಿನಲ್ಲಿ ಕೆಲವರು ಅನಧಿಕೃತವಾಗಿ ಹೂವಿನ ಅಂಗಡಿ ಇಟ್ಟುಕೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿರುವ ತಂಗುದಾಣದಲ್ಲೂ ಹೂವು ಮೂಟೆ ದಾಸ್ತಾನು ಮಾಡುವುದು ವಹಿವಾಟಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಅನಧಿಕೃತ ವ್ಯಾಪರಸ್ಥರನ್ನು ಹಳೇ ಬಸ್ ನಿಲ್ದಾಣ ಸಮೀಪದಲ್ಲಿರುವ ಖಾಲಿ ಜಾಗದಲ್ಲಿ ಅಂಗಡಿ ಇಟ್ಟುಕೊಳ್ಳಲು ಅವಕಾಶ ಕಲ್ಪಿಸಿದರೆ ಹೂವು ಮಾರುಕಟ್ಟೆಗೆ ಸೂಕ್ತ ಜಾಗವಾಗುತ್ತದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.
ಬರದ ನಡುವೆಯೂ ಕೊಳವೆಬಾವಿಗಳಲ್ಲಿ ಲಭ್ಯವಿರುವ ಅಲ್ಪ ಪ್ರಮಾಣದ ನೀರಿನಲ್ಲೇ ಹೂವು ಬೆಳೆದು ರೈತರು ಮಾರುಕಟ್ಟ್ಟೆಗೆ ತರುತ್ತಾರೆ. 25ಕ್ಕೂ ಹೆಚ್ಚು ಹೂವು ವ್ಯಾಪಾರಸ್ಥರಿದ್ದು, ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎ್, ಬಂಗಾರಪೇಟೆ ರೈತರು ಹೂವು ತರುತ್ತಾರೆ. ಪ್ರಮುಖವಾಗಿ ಚಾಮಂಚಿ, ಬಟನ್ ರೋಜಾ, ಮಲ್ಲಿಗೆ, ಕಾಕಡ, ಕನಕಾಂಬರ, ಚೆಂಡು ಹೂವು ಸೇರಿ ವಿವಿಧ ಜಾತಿಯ ಅಲಂಕಾರಿಕ ಹೂವಿನ ಮಾರಾಟ ನಡೆಯುತ್ತದೆ.
ನಗರಸಭೆಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ವ್ಯಾಪಾರಸ್ಥರು ಬಾಡಿಗೆಗೆ ಪಡೆದು ಹೂವು ವ್ಯಾಪಾರ ನಡೆಸಿಕೊಳ್ಳುತ್ತಿದ್ದಾರೆ. ಪ್ರತಿದಿನ ಹೆಚ್ಚು ರೈತರು ಹೂವು ತರುವುದರಿಂದಾಗಿ ಬೀದಿಬದಿ ಇಟ್ಟಿರುವ ಅಂಗಡಿಗಳನ್ನು ತೆರವುಗೊಳಿಸಿ ಇಂದಿರಾ ಕ್ಯಾಂಟೀನ್ ಪಕ್ಕದ ಖಾಲಿ ಜಾಗಕ್ಕೆ ಸ್ಥಳಾಂತರ ಮಾಡಿ, ಹೂವು ಮಾರುಕಟ್ಟೆಗೆ ಜಾಗ ಕಲ್ಪಿಸಬೇಕು ಎಂಬುದು ವ್ಯಾಪಾರಸ್ಥರ ಒತ್ತಾಯವಾಗಿದೆ.
ಹೂವನ್ನು ನಿತ್ಯ ಮಾರುಕಟ್ಟೆಗೆ ತರುತ್ತೇನೆ. ಜಾಗ ಕಿರಿದಾಗಿರುವುದರಿಂದ ಮಾರುಕಟ್ಟೆಗೆ ಒಳಗೆ ಸಿಕ್ಕಿ ಹಾಕಿಕೊಂಡರೆ ಹೊರ ಹೋಗುವುದು ಸವಾಲಾಗಿದೆ. ಹೂವು ಮಾರುಕಟ್ಟೆಯನ್ನು ಸೂಕ್ತ ರೀತಿ ಮಾಡಿದರೆ ಇನ್ನು ಹೆಚ್ಚಿಗೆ ಹೂವು ಬೆಳೆಯಲು ರೈತರು ಮುಂದಾಗುತ್ತಾರೆ.