

ಚಿತ್ರದುರ್ಗ: ಸ್ವ ಸಹಾಯ ಗುಂಪಿನ ಸದಸ್ಯರಿಗೆ ಘನತ್ಯಾಜ್ಯ ನಿರ್ವಹಣಾ ಘಟಕಗಳ ಜವಾಬ್ದಾರಿ ವಹಿಸಲಾಗಿದೆ ಎಂದು ಜಿಪಂ ಸಿಇಒ ಎಂ.ಎಸ್.ದಿವಾಕರ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಪಂ ಮಟ್ಟದ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಘನತ್ಯಾಜ್ಯ ನಿರ್ವಹಣೆ ಮತ್ತು ಕಾರ‌್ಯಾಚರಣೆ ಕುರಿತ 5 ದಿನಗಳ ತರಬೇತಿ ಸಮಾರೋಪ ಸಮಾರಂಭದಲ್ಲಿ ತರಬೇತಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಸ್ವಚ್ಛ ವಾಹಿನಿಗೆ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಘಟಕಗಳಲ್ಲಿ ವಿಂಗಡಿಸಿದ ತ್ಯಾಜ್ಯವನ್ನ ಸಂಪನ್ಮೂಲವಾಗಿ ಪರಿವರ್ತಿಸಿ ಅಧಿಕ ಲಾಭಗಳಿಸ ಬೇಕು. ನಿರ್ವಹಣೆ ವೆಚ್ಚವೆಂದು ಪ್ರತಿ ಕುಟುಂಬದಿಂದ ಶುಲ್ಕ ಸಂಗ್ರಹಿಸಬೇಕು. ಈವರೆಗೆ 166 ಗ್ರಾಪಂಗಳ ವ್ಯಾಪ್ತಿ ಒಕ್ಕೂಟದ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ವಾಹನದ ಚಾಲನೆಗೆ ಮಹಿಳೆಯರನ್ನೇ ನೇಮಕ ಮಾಡಿಕೊಳ್ಳುವುದರ ಮೂಲಕ ಸಂಪೂರ್ಣ ಹೊಣೆಯನ್ನು ನಾರಿಯರಿಗೆ ವಹಿಸಲಾಗುತ್ತಿದೆ. ಈವರೆಗೆ 65 ಮಂದಿ ಚಾಲನಾ ತರಬೇತಿ ಪಡೆದಿದ್ದಾರೆ. 32 ಮಹಿಳೆಯರು ತರಬೇತಿ ಪಡೆಯುತ್ತಿದ್ದಾರೆ ಎಂದರು.
ಜಿಪಂ ಯೋಜನಾ ನಿರ್ದೇಶಕ ಕೆ.ಎಸ್ ಮಹಾಂತೇಶಪ್ಪ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಸ್ಪೀಚ್ ಸ್ವ ಸಹಾಯ ಸೇವಾ ಸಂಸ್ಥೆ ಕಾರ್ಯದರ್ಶಿ ಶೇಷಣ್ಣ ಇತರರಿದ್ದರು.
ಮನೆ ಬಾಗಿಲಿಗೆ ಬ್ಯಾಂಕಿಂಗ್ ವ್ಯವಸ್ಥೆ
ಜಿಪಂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ)-ಸಂಜೀವಿನಿ ಯೋಜನೆಯಡಿ ಡಿಜಿ ಪೇ ಸಖಿಗಳಿಗೆ ಡಿಜಿ ಪೇ ಬಯೋಮೆಟ್ರಿಕ್ ಉಪಕರಣಗಳನ್ನು ಸಿಇಒ ವಿತರಿಸಿದರು. ಬಳಿಕ ಮಾತನಾಡಿ, ಗ್ರಾಮೀಣ ಪ್ರದೇಶದ ಕುಟುಂಬಗಳ ಹಣಕಾಸಿನ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸಲು ಒಂದು ಜಿಪಿ ಒಂದು ಬಿಸಿ (ಬ್ಯಾಂಕ್ ಕರಸ್ಪಾಂಡೆಂಟ್) ಕಾರ್ಯಕ್ರಮದಡಿ ಜಿಲ್ಲೆಯ 184 ಗ್ರಾಪಂ ಬಿಸಿ/ಡಿಜಿ ಪೇ ಸಖಿಗಳಿಗೆ ತರಬೇತಿ ನೀಡಲಾಗಿದ್ದು, ಸೂಕ್ತ ಗೌರವಧನವೂ ವಿತರಿಸಲಾಗುವುದು. ಡಿಜಿ ಪೇ ಮೂಲಕ ಆಯ್ದ ಯೋಜನೆಯ ಪಿಂಚಣಿ ಫಲಾನುಭವಿಗಳಿಗೆ, ನರೇಗಾ ಭತ್ಯೆಗಳನ್ನು ಪಾವತಿಸಬಹುದಾಗಿದೆ ಎಂದರು.