ಸ್ವಚ್ಛತಾ ಸಲಕರಣೆ ಖರೀದಿಯಲ್ಲಿ ಅವ್ಯವಹಾರ?

klr cmc
ಕೋಲಾರ ನಗರಸಭೆ ಕಚೇರಿ
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ
ನಗರ, ಗ್ರಾಮೀಣ, ಪಟ್ಟಣ ಹಾಗೂ ಪುರಸಭೆಗಳ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆ ಜಾರಿಗೆ ತಂದಿದ್ದು, ಕೋಟ್ಯಂತರ ರೂ. ಅನುದಾನ ಮೀಸಲಿಡುತ್ತಿವೆ. ಆದರೆ, ಯೋಜನೆಯ ಅನುಷ್ಠಾನದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿವೆ.

ಕೋಲಾರ ನಗರಸಭೆಯಿಂದ ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛತಾ ಸಲಕರಣೆ ಖರೀದಿ ಮಾಡುವಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೇಕಿರುವ ಹಾಗೂ ಕೋಲಾರ ನಗರದಲ್ಲಿ ಉತ್ಪತ್ತಿಯಾಗುವ ಕಸ ವಿಲೇವಾರಿ ಮಾಡಲು ಟೆಂಡರ್​ ಕರೆಯಲಾಗಿತ್ತು. ಸ್ವಚ್ಛಭಾರತ್​ ಮಿಷನ್​ ಯೋಜನೆಯಡಿ 2.40 ಕೋಟಿ ರೂ. ಅನುದಾನದಲ್ಲಿ 6 ಸಿಸಿ ಕ್ಯಾಮರಾ, 6 ಎಲೆಕ್ಟ್ರಿಕ್​ ಮಿನಿ ಟಿಪ್ಪರ್​, 1*ಕಾಂಪ್ಯಾಕ್ಟರ್​, 2 ಚಾರ್ಜಿಂಗ್​ ಪಾಯಿಂಟ್​, 1 ಲೋಡರ್​, 15 ಪುಶ್​ಕಾರ್ಟ್​, 2 ಟ್ರ್ಯಾಕ್ಟರ್​ ಇಂಜಿನ್​ ಖರೀದಿಗೆ ಕ್ರಿಯಾಯೋಜನೆ ರೂಪಿಸಿ ಅದಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ.
ಜೇಮ್​ ಪೋರ್ಟಲ್​ ಮೂಲಕ (ವರ್ನಮೆಂಟ್​ ಇ ಮಾರ್ಕೆಂಟಿಗ್​) ಟೆಂಡರ್​ ಕರೆಯಲಾಗಿತ್ತು. ಬೆಂಗಳೂರಿನ ಅಫ್ಲಾ ಟೆಕ್ನಾಲಜೀಸ್​ ಸಂಸ್ಥೆ ಟೆಂಡರ್​ ಪಡೆದುಕೊಂಡಿದ್ದರು. ಆದರೆ, ನಿಯಮ ಉಲ್ಲಂಘಿಸಿ ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣಕ್ಕೆ ಸರಬರಾಜು ಮಾಡಲಾಗಿದ್ದು, ಟೆಂಡರ್​ ಪಡೆದುಕೊಂಡಿರುವ ಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಶಾಮೀಲಾಗಿ ಅವ್ಯವಹಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಖರೀದಿ ಮಾಡುವ ವೇಳೆ ಎಲ್ಲ ವಾಹನಗಳು ಹಾಗೂ ಯಂತ್ರಗಳನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಖರೀದಿ ಮಾಡಿದ್ದಾರೆ. 6 ಬುಲೆಟ್​ ಸಿಸಿ ಕ್ಯಾಮರಾಗೆ ಮಾರುಕಟ್ಟೆ ಬೆಲೆ 10 ಸಾವಿರ ರೂ. ಇದ್ದರೆ ಬಿಲ್​ ಪಾವತಿ ಮಾಡಿರುವುದು 6.5 ಲಕ್ಷ ರೂ, 34 ಸಾವಿರ ರೂ. ಬೆಲೆಯ 2 ಚಾರ್ಜಿಂಗ್​ ಪಾಯಿಂಟ್​ಗೆ 8 ಲಕ್ಷ ರೂ. ಪಾವತಿ ಮಾಡಲಾಗಿದೆ. 1.20 ಲಕ್ಷ ಬೆಲೆಯ 15 ಪುಶ್​ ಕಾರ್ಟ್​ಗೆ ಇಲ್ಲಿ 5.5 ಲಕ್ಷ ರೂ., 60 ಲಕ್ಷ ಬೆಲೆಯ 6 ಎಲೆಕ್ಟ್ರಿಕ್​ ಮಿನಿ ಟಿಪ್ಪರ್​ಗೆ 98 ಲಕ್ಷ ರೂ. ನೀಡಲಾಗಿದೆ. 25 ಲಕ್ಷ ಬೆಲೆ ಬಾಳುವ ರೆಪ್ಯೂಸ್​ ಕಾಂಪ್ಯಾಕ್ಟರ್​ಗೆ 51 ಲಕ್ಷ ರೂ. ಬಿಲ್​ ಪಾವತಿ ಮಾಡಲಾಗಿದ್ದು, ಇದರ ಇನ್​ವಾಯ್ಸ್​ ಬಿಲ್​ "ವಿಜಯವಾಣಿ'ಗೆ ಲಭ್ಯವಾಗಿದೆ. 16,500 ರೂ. ಬೆಲೆಯಿರುವ ಒಂದು ಇವಿ ಚಾರ್ಜರ್​ಗೆ ಹೆಚ್ಚುವರಿಯಾಗಿ 3.38 ಲಕ್ಷ ರೂ. ಹೀಗೆ ಎರಡು ಚಾರ್ಜರ್​ಗಳಿಗೆ ಒಟ್ಟು 7.99 ಲಕ್ಷ ರೂ. ಪಾವತಿ ಮಾಡಲಾಗಿದೆ.

ಕೋಲಾರ ನಗರಸಭೆ ಆವರಣದಲ್ಲಿ ನಿಲ್ಲಿಸಲಾಗಿರುವ ಇವಿ ವಾಹನ, ಲೋಡರ್​ ಯಂತ್ರ.
ಕೋಲಾರ ನಗರಸಭೆ ಆವರಣದಲ್ಲಿ ನಿಲ್ಲಿಸಲಾಗಿರುವ ಇವಿ ವಾಹನ, ಲೋಡರ್​ ಯಂತ್ರ.

ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು
ಶಾಸಕ ಕೊತ್ತೂರು ಜಿ.ಮಂಜುನಾಥ ಅವರು ಇತ್ತೀಚೆಗೆ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಸಲಕರಣೆ ಖರೀದಿಯಲ್ಲಿ ಹಾಗೂ ಚಾರ್ಜರ್​ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಇದು ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು. ಈ ವಿಚಾರವು ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದ್ದು, ಸೂಕ್ತ ತನಿಖೆಗಾಗಿ ನಗರಸಭೆ ಸದಸ್ಯರೊಬ್ಬರು ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರಿಗೆ ದೂರು ನೀಡಿದ್ದಾರೆ.

ಥರ್ಡ್​ ಪಾರ್ಟಿ ಪರಿಶೀಲನೆಯಲ್ಲೂ ಅಕ್ರಮ
ಗುತ್ತಿಗೆ ಸಂಸ್ಥೆ ಟೆಂಡರ್​ನಲ್ಲಿ ವಿಧಿಸಿರುವ ನಿಯಮಗಳಂತೆ ಸಲಕರಣೆ ಖರೀದಿ ಮಾಡಿಲ್ಲ, ಪುಶ್​ಕಾರ್ಟ್​, ವೀಲ್​ಬಾರ್​ಗಳು ಕಳಪೆಯಾಗಿದೆ. ಅಲ್ಲದೆ, ಥರ್ಡ್​ ಪಾರ್ಟಿ ಪರಿಶೀಲನೆಯನ್ನು ಹುಬ್ಬಳಿ ಖಾಸಗಿ ಸಂಸ್ಥೆಯಿಂದ ಮಾಡಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡದೆ ಪಶೀಲನೆ ಮಾಡಿರುವುದಾಗಿ ಪ್ರಮಾಣ ಪತ್ರ ನೀಡಿದ್ದಾರೆ. ಇದರಲ್ಲಿ ಅಧಿಕಾರಗಳು ನೇರವಾಗಿ ಭಾಗಿಯಾಗಿರುವ ಗುಮಾನಿ ಇದೆ.

ಮುನಿರತ್ನ ಅಪ್ತರು?
ಕೋಲಾರ ನಗರಸಭೆಗೆ ಸಲಕರಣೆಗಳನ್ನು ಸರಬರಾಜು ಮಾಡಿರುವ ಬೆಂಗಳೂರಿನ ಅಲ್ಫಾ ಗುತ್ತಿಗೆ ಸಂಸ್ಥೆಯ ಮುಖ್ಯಸ್ಥರು ಶಾಸಕ ಮುನಿರತ್ನ ಅವರ ಆಪ್ತರು ಎಂದು ಸದಸ್ಯರ ಮೂಲಗಳಿಂದ ತಿಳಿದು ಬಂದಿದೆ. ಇದೇ ಸಂಸ್ಥೆಯವರು ಕೋಲಾರ ನಗರಸಭೆ ಸೇರಿ ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆಗೂ ಸಿಸಿ ಕ್ಯಾಮರಾ ಇತರ ಸಲಕರಣೆಗಳ ಟೆಂಡರ್​ ಪಡೆದುಕೊಂಡು ಕಳಪೆ ಸಾಮಗ್ರಿ ನೀಡಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ.

ಕೋಟ್​..
ಡಿಎಂಎಯಿಂದ ಅನುಮೋದನೆ ಪಡೆದು ಟೆಂಡರ್​ ಕರೆಯಲಾಗಿದ್ದು. ಇದಕ್ಕೆ ದರಪಟ್ಟಿಯನ್ನು ನೇರವಾಗಿಯೇ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರದ ಜೇಮ್​ ಪೋರ್ಟಲ್​ ಮಾರ್ಕೆಟಿಂಗ್​ ಬೆಲೆಗೆ ತಕ್ಕಂತೆ ಯಂತ್ರಗಳು, ಸಲಕರಣೆಗಳನ್ನು ಖರೀದಿ ಮಾಡಲಾಗಿದೆ. - ಅಕ್ರಂಪಾಷಾ, ಜಿಲ್ಲಾಧಿಕಾರಿ, ಕೋಲಾರ

ಕೋಟ್​…
ನಗರಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ, ಅಧಿಕಾರಿಗಳಿಗೆ ಹೇಳೋರು, ಕೇಳೊರೇ ಇಲ್ಲದಂತಾಗಿದೆ. ಚುನಾಯಿತ ಮಂಡಳಿ ಇಲ್ಲದಿದ್ದಾಗ ಸಾಕಷ್ಟು ಕೆಲಸಗಳಿಗೆ ಟೆಂಡರ್​ಕರೆದಿದ್ದು, ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆಸಿರುವ ಅನುಮಾನ ಇದೆ. ತನಿಖೆ ನಡೆಸಲು ದೂರು ನೀಡಿದ್ದೇನೆ. - ಎಸ್​.ಆರ್​.ಮುರಳಿಗೌಡ, ನಗರಸಭೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net