

ತಿ.ನರಸೀಪುರ: ಮಹರ್ಷಿ ವಾಲ್ಮೀಕಿಯವರು ರಾಮರಾಜ್ಯ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಸಂತ. ಪಿತೃವಾಕ್ಯ ಪರಿಪಾಲನೆ, ಭಾತೃತ್ವ, ಸಮಾನತೆ, ಮಹಿಳೆಯರಿಗೆ ಗೌರವ ನೀಡುವುದು ಸೇರಿದಂತೆ ಅನೇಕ ಸಂದೇಶಗಳನ್ನು ರಾಮಾಯಣ ಮಹಾಕಾವ್ಯದ ಮೂಲಕ ನಮಗೆ ನೀಡಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಬಿ.ವಸಂತಾ ಶ್ರೀಕಂಠ ತಿಳಿಸಿದರು.
ಪಟ್ಟಣದ ಪುರಸಭಾ ಕಛೇರಿ ಆವರಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಮಾಯಣದಂತ ಹ ಶ್ರೇಷ್ಠ ಮಹಾಕಾವ್ಯವನ್ನು ನೀಡಿ ವಾಲ್ಮೀಕಿ ಎಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ ಎಂದರು.
ಸದಸ್ಯ ತುಂಬಲ ಪ್ರಕಾಶ್ ಮಾತನಾಡಿ, ವಾಲ್ಮೀಕಿ ಕುಟುಂಬ ಧರ್ಮಕ್ಕಿಂತ ರಾಜ ಧರ್ಮ ಪಾಲನೆ ಶ್ರೇಷ್ಠವಾದದ್ದು ಎಂದು ಜಗತ್ತಿಗೆ ಸಾರಿದ್ದಾರೆ. ನಮ್ಮ ಪರಂಪರೆಯಲ್ಲಿ ನಮ್ಮ ಸಂಸ್ಕೃತಿ ನಿರ್ಮಾತೃರು ನಾವೇ ಆಗಿದ್ದೇವೆ ಎಂಬ ತತ್ವವನ್ನು ಸಾರಿದ ಮಹರ್ಷಿಗಳು ಜಗತ್ತಿನ ಆದಿ ಗುರುವಾಗಿದ್ದಾರೆ ಎಂದರು.
ನಿಕಟ ಪೂರ್ವ ಅಧ್ಯಕ್ಷ ಟಿ.ಎಂ.ನಂಜುಂಡ ಸ್ವಾಮಿ, ಉಪಾಧ್ಯಕ್ಷೆ ರಾಜೇಶ್ವರಿ ರಾಘವೇಂದ್ರ, ಮುಖ್ಯಾಧಿಕಾರಿ ಬಿ.ಕೆ.ವಸಂತ ಕುಮಾರಿ, ಸದಸ್ಯರಾದ ಎಸ್.ಕೆ.ಕಿರಣ್.ಮೇಡಿಕಲ್ ನಾಗರಾಜು,ಮಂಜುನಾಥ್, ರೂಪಶ್ರೀ ಪರಮೇಶ್, ತೇಜಸ್ವಿನಿ ರಾಜು, ಸಿಸ್ಟಮ್ ಸಿದ್ದು , ಮುಖಂಡರಾದ ಬಿ.ಮರಯ್ಯ, ರಾಘವೇಂದ್ರ, ಶ್ರೀಕಂಠ, ಮಾದೇಶ್, ಇಂಜಿನಿಯರ್ ನಾಗರಾಜು, ಸಮುದಾಯ ಸಂಘಟಕ ಅಧಿಕಾರಿ ಮಹದೇವನಾಯಕ,ಮಹೇಂದ್ರ, ಆಶಾ, ರಾಜೇಂದ್ರ, ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.