ಕಾಂಗ್ರೆಸ್​ ಪಕ್ಷದ ಶಾಸಕಾಂಗ ಸಭೆಯಲ್ಲಿ ಗದ್ದಲ; ಗೊತ್ತೇ ಇಲ್ಲವೆಂದ ಪಕ್ಷದ ಮುಖ್ಯಸ್ಥ

congress
Published on

ಪಟನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವ ಕಾಂಗ್ರೆಸ್​ ಶುಕ್ರವಾರ ಪಕ್ಷದ ಶಾಸಕಾಂಗ ಸಭೆ ನಡೆಸಿದೆ. ಈ ವೇಳೆ ಇಬ್ಬರು ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಗದ್ದಲ ಉಂಟಾಗಿದೆ.

ಶಾಸಕ ವಿಜಯ್​ ಶಂಕರ್​ ದುಬೆ ಮತ್ತು ಸಿದ್ಧಾರ್ಥ ಅವರ ನಡುವೆ ಜಗಳ ಉಂಟಾಗಿದೆ. ಜಗಳ ಸ್ವಲ್ಪ ಹೆಚ್ಚಾಗಿಯೇ ನಡೆದಿದ್ದು, ಕೆಲ ಕಾರ್ಯಕರ್ತರು ಮತ್ತು ನಾಯಕರು ತಳ್ಳಾಡಿಕೊಳ್ಳುವ ವಿಡಿಯೋ ಎಲ್ಲೆಡೆ ಹರಿದಾಡಿದೆ. ಛತ್ತೀಸಗಢ ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕ ಭೂಪೇಶ್​ ಬಾಗೇಲ್​ ಅವರ ಉಪಸ್ಥಿತಿಯಲ್ಲೇ ಈ ಗದ್ದಲ ನಡೆದಿದೆ ಎನ್ನಲಾಗಿದೆ.

ಪಕ್ಷದ ಕಚೇರಿಯಲ್ಲಿ ಇಷ್ಟೆಲ್ಲ ಗದ್ದಲವಾದರೂ ತನಗೆ ಗದ್ದಲ ನಡೆದಿದ್ದೇ ಗೊತ್ತಿಲ್ಲ ಎಂದು ಪಕ್ಷದ ಅಧ್ಯಕ್ಷ ಮದನ್​ ಮೋಹನ್​ ಝಾ ಹೇಳಿದ್ದಾರೆ. ಈ ವಿಚಾರವಾಗಿ ನಾನು ನಂತರ ತಿಳಿದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ. ಸಭೆಯಲ್ಲಿ ಶಾಸಕ ಅಬಿದೂರ್​ ರೆಹಮಾನ್​ ಮತ್ತು ಮನೋಹರ್​ ಪ್ರಸಾದ್​ ಅವರು ಭಾಗವಹಿಸದಿರುವುದರ ಹಿಂದೆ ಬೇರೇನು ಅರ್ಥವಿಲ್ಲ. ಅದರಲ್ಲಿ ಒಬ್ಬರಿಗೆ ಆರೋಗ್ಯ ಸರಿಯಿಲ್ಲ ಹಾಗೂ ಮತ್ತೊಬ್ಬರು ನಿನ್ನೆಯಷ್ಟೇ ನಮ್ಮನ್ನು ಭೇಟಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್​ ಕಳಪೆ ಪ್ರದರ್ಶನ ತೋರಿದೆ. 70 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಪಕ್ಷ ಕೇವಲ 19 ಸ್ಥಾನಗಳಲ್ಲಿ ಜಯ ಗಳಿಸಿದೆ. ಕಾಂಗ್ರೆಸ್​ನಿಂದಲೇ ಮಹಾಘಟಬಂಧನಕ್ಕೆ ಹಿನ್ನೆಡೆಯಾಗಿದ್ದಾಗಿ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net