

ಗದಗ: ಬೆಳಗಿನ ಜಾವ 4 ಗಂಟೆ, ಇನ್ನೂ ಕತ್ತಲು ಇತ್ತು. ನಮ್ಮನ್ನು ಅಮ್ಮ ಕರೆದ್ಯೊಯ್ದಳು. ಎಲ್ಲಿಗೆ ಅಂತ ಕೇಳಿದ್ರೆ ಊರಿಗೆ ಹೋಗೋಣ ಅಂದ್ಲು. ನದಿ ಕಡೆಗೆ ನಮ್ಮನ್ನು ಎಳೆದೊಯ್ಯುತ್ತಿದ್ಲು. ನನಗೆ ಭಯವಾಗಿ 'ಅಮ್ಮ ಬೇಡಮ್ಮ..' ಅಂತ ಎಷ್ಟೇ ಗೋಗರೆದ್ರೂ ಕೇಳಲಿಲ್ಲ. ನನ್ನ ಕೂದಲು ಹಿಡಿದುಕೊಂಡು ಎಳೆದ್ಲು. ನಾನು 'ಅಮ್ಮ ಬೇಡ.. ಬಾರಮ್ಮ..' ಅಂತ ಅವಳ ಸೀರೆ ಹಿಡಿದು ಎಳೆದ್ರೂ ಕೇಳಲ್ಲಿಲ್ಲ. ನಾನು ಮತ್ತು ಇನ್ನೊಬ್ಬ ತಂಗಿ ಈಕಡೆ ಸರಿದಾಗ, ನನ್ನ ಚಿಕ್ಕ ತಂಗೀನ ಎತ್ತಿಕೊಂಡು ಅಮ್ಮ ನದಿಗೆ ಬಿದ್ಲು... ನಾವಿಬ್ರೂ ಮನೆಗೆ ಬಂದ್ವಿ...
ಇದು ರೋಣ ತಾಲೂಕಿನ ಹೊಳೆಆಲೂರಿನಲ್ಲಿ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಕುರಿತು ಬಾಲಕಿ ನಿತ್ಯಶ್ರೀ ಬಿಚ್ಚಿಟ್ಟ ಕರಾಳತೆ. ಬುಧವಾರ ನಸುಕಿನಲ್ಲಿ ಉಮಾ ಸಂಗಮೇಶ ಶೆಲ್ಲಿಕೇರಿ (44) ಎಂಬ ಮಹಿಳೆ ಮೂವರು ಮಕ್ಕಳನ್ನು ಕರೆದುಕೊಂಡು ಮಲಪ್ರಭಾ ನದಿ ಬಳಿ ತೆರಳಿದ್ದರು. ಈಕೆಗೆ ನಾಲ್ವರು ಹೆಣ್ಣುಮಕ್ಕಳು. ಒಬ್ಬಾಕೆ ಧಾರವಾಡದಲ್ಲಿ ಪಿಯುಸಿ ಓದುತ್ತಿದ್ದಾಳೆ. ಉಳಿದ ಮೂವರು ಮಕ್ಕಳ ಸಮೇತ ಆತ್ಮಹತ್ಯೆ ಮುಂದಾಗಿದ್ದಳು. 7ನೇ ತರಗತಿ, 1ನೇ ತರಗತಿಯಲ್ಲಿ ಕಲಿಯುವ ಹೆಣ್ಣುಮಕ್ಕಳು ಸಾಯಲು ಬರಲ್ಲ ಎಂದು ತಾಯಿಯ ಜತೆಗೆ ತಕರಾರು ತೆಗೆದಿದ್ದಾರೆ. ಆತ್ಮಹತ್ಯೆ ಬೇಡ ಎಂದು ಸೀರೆ ಹಿಡಿದು ಜಗ್ಗಿದ್ದಾರೆ. ಆಗ ಸೀರೆ ಕಿತ್ತುಬಂದಿದೆ. ಆದ್ರೂ ಮನಕರಗದ ತಾಯಿ, 2 ವರ್ಷದ ಹೆಣ್ಣುಮಗುವನ್ನು ಬಗಲಲ್ಲಿ ಎತ್ತಿಕೊಂಡು ಹೊಳೆಆಲೂರ- ಬದಾಮಿ ಸಂಪರ್ಕ ಸೇತುವೆ ಕೆಳಗೆ ನದಿಗೆ ಹಾರಿದ್ದಳು. ತಾಯಿಯ ಕೈಯಿಂದ ತಪ್ಪಿಸಿಕೊಂಡು ಮನೆಗೆ ಓಡಿ ಬಂದ ಮಕ್ಕಳಿಬ್ಬರು ಗ್ರಾಮಸ್ಥರಿಗೆ ವಿಚಾರ ತಿಳಿಸಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ತಾಯಿ-ಮಗುವಿಗಾಗಿ ಶೋಧ ಕಾರ್ಯ ನಡೆಸಿದರು.
ಮಗು ಸಮೇತ ತಾಯಿ ಹಾರಿದ ಜಾಗದಲ್ಲಿ ನೀರು ಆಳ ಇಲ್ಲ. ಅರ್ಧ ಕಿಮೀ ದೂರ ಹರಿದುಹೋದ ನಂತರ ಮುಳ್ಳಿನ ಗಿಡದಲ್ಲಿ ಮಹಿಳೆ ಸಿಕ್ಕಿಹಾಕಿಕೊಂಡಿದ್ದಳು. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ತಂಡ, ಮಹಿಳೆಯನ್ನು ಹೊರಕ್ಕೆ ಕರೆತಂದು ಆಂಬುಲೆನ್ಸ್ ಮೂಲಕ ಬಾದಾಮಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಇನ್ನೂ ಸಿಕ್ಕಿಲ್ಲ. ಶೋಧ ಕಾರ್ಯ ಮುಂದುವರಿದಿದೆ.
ಗಂಡನ ಸಾವು-ಸಾಲಕ್ಕೆ ಕಂಗಟ್ಟ ಮಹಿಳೆ: ಉಮಾಳ ಪತಿ ಸಂಗಮೇಶ ಶಲ್ಲಿಕೇರಿ ಅವರು 6 ತಿಂಗಳ ಹಿಂದೆ ಕರೊನಾ ಸೋಂಕಿಗೆ ಬಲಿಯಾಗಿದ್ದರು. ಸಂಗಮೇಶ್ ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಗಂಡನ ಸಾವಿಂದ ಕಂಗೆಟ್ಟ ಉಮಾ ಮಹಿಳೆ ಆತ್ಮಹತ್ಯೆಗೆ ಮುಂದಾಗಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 20 ಎಕರೆ ಹೊಲ ಇದ್ದು, ಪಿಂಚಣಿ ಬರುವ ಕಾರಣ ಯಾವುದೇ ಹಣಕಾಸಿನ ತೊಂದರೆ ಇರಲಿಲ್ಲ ಎನ್ನಲಾಗಿದೆ.