Couple dangerous bike stunt: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ಪ್ರೇಮಲೋಕ’ ಸಿನಿಮಾದ ಹಿಟ್ ಹಾಡಿನಲ್ಲಿ ಬೈಕ್ ಮೇಲೆ ಹೀರೋಯಿನ್ ಕೂರಿಸಿಕೊಂಡು ಹೋಗುವ ಸೀನ್ ನೆನಪಿದೆಯಾ? ಥೇಟ್ ಅದೇ ಶೈಲಿಯಲ್ಲಿ, ‘ಏ ಗಂಗೂ, ಈ ಬೈಕೂ ಕಲಿಸಿಕೊಡೋ ನಂಗೂ’ ಎನ್ನುವಂತೆ ಯುವತಿಯೊಬ್ಬಳು ಬೈಕ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವಕನನ್ನು ತಬ್ಬಿಕೊಂಡು ಕುಳಿತು ಹುಚ್ಚಾಟ ಮೆರೆದಿದ್ದಾರೆ.
ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು ಈ ಅಪಾಯಕಾರಿ ಹಾಗೂ ನಿಯಮಬಾಹಿರ ಸವಾರಿಯನ್ನು ತಮ್ಮ ಮೊಬೈಲ್ನಲ್ಲಿ ವೀಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವೀಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಘಟನೆಯು ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯ ಸಂದೀಪನ್ ಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬಸೇಡಿ ಸಮೀಪದ 'ರಾಮ ವನ ಗಮನ ಮಾರ್ಗ'ದಲ್ಲಿ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುದ್ದಿ ಮಾಧ್ಯಮಗಳಲ್ಲೂ ವರದಿಯಾಗಿದೆ.
ಹೈವೇಯಲ್ಲಿ ನಿಯಮ ಗಾಳಿಗೆ ತೂರಿ ಸಾರ್ವಜನಿಕರ ಜೀವಕ್ಕೂ ಅಪಾಯ ತಂದೊಡ್ಡುವಂತೆ ಸವಾರಿ ಮಾಡಿದ್ದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ವೈರಲ್ ವೀಡಿಯೋದಲ್ಲಿ ಬೈಕ್ನ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸುತ್ತಿದೆ.
ಸಂಚಾರಿ ನಿಯಮಗಳ ಉಲ್ಲಂಘನೆ ಮತ್ತು ರಸ್ತೆ ಸುರಕ್ಷತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ, ಬೈಕ್ ನಂಬರ್ ಆಧರಿಸಿ ಆ ಯುವಕನನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸರು ಮತ್ತು ಸಂಚಾರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.