Alcohol psychology: ಕುಡಿದವರು ಯಾವಾಗಲೂ ಸತ್ಯವನ್ನೇ ಬಾಯಿಬಿಡುತ್ತಾರೆ ಎಂಬ ಮಾತು ನಮ್ಮ ಸಮಾಜದಲ್ಲಿ ಬಹಳ ಜನರಲ್ಲಿದೆ. ಆದ್ರೆ, ಇದು ಸಂಪೂರ್ಣವಾಗಿ ನಿಜವಲ್ಲ. ಮದ್ಯ ಎಂಬುದು ಯಾವತ್ತೂ ಮನುಷ್ಯನನ್ನು ಸತ್ಯ ಹೇಳಿಸುವ 'ಟ್ರುತ್ ಸೀರಮ್' ಅಲ್ಲ. ಬದಲಿಗೆ, ಇದು ಮೆದುಳಿನ ಮೇಲಿನ ಹಿಡಿತವನ್ನು ಸಡಿಲಗೊಳಿಸಿ, ಮನಸ್ಸಿನಲ್ಲಿರುವುದನ್ನು ಯಾವುದೇ ಫಿಲ್ಟರ್ ಇಲ್ಲದೆ ಹೊರಹಾಕುವಂತೆ ಮಾಡುತ್ತದೆ ಅಷ್ಟೇ.
ಮನೋವಿಜ್ಞಾನ ಮತ್ತು ನರವಿಜ್ಞಾನದ ಪ್ರಕಾರ, ಕುಡಿದಾಗ ಮನುಷ್ಯನ ವರ್ತನೆ ಹೇಗಿರುತ್ತದೆ ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ:
ನಮ್ಮ ಮೆದುಳಿನ 'ಪ್ರೀಫ್ರಂಟಲ್ ಕಾರ್ಟೆಕ್ಸ್' ಭಾಗವು ನಾವು ಏನು ಮಾತನಾಡಬೇಕು, ಯಾವುದನ್ನು ಮಾತಾಡಬಾರದು ಎಂದು ಸಮಾಜದ ಹಿನ್ನೆಲೆಯಲ್ಲಿ ನಿರ್ಧರಿಸುತ್ತದೆ. ಆದರೆ ಮದ್ಯ ಸೇವಿಸಿದಾಗ ಈ ಭಾಗದ ಕೆಲಸ ನಿಧಾನವಾಗುತ್ತದೆ. ಇದರಿಂದಾಗಿ, ಮಾತನಾಡಿದ್ರೆ ಏನಾಗುತ್ತೆ ಅನ್ನೋ ಯೋಚನೆ ಹೋಗಿ, ಮನಸ್ಸಿನಲ್ಲಿ ಮುಚ್ಚಿಟ್ಟಿದ್ದ ಭಾವನೆಗಳು ಅಥವಾ ಅಸಮಾಧಾನಗಳು ಆರಾಮಾಗಿ ಹೊರಬರುತ್ತವೆ.
ಈ ಸಿದ್ಧಾಂತದ ಪ್ರಕಾರ, ಮದ್ಯ ಕುಡಿದಾಗ ವ್ಯಕ್ತಿಯ ಆಲೋಚನಾ ಶಕ್ತಿ ಕೇವಲ ಆ ಕ್ಷಣಕ್ಕೆ ಮಾತ್ರ ಸೀಮಿತವಾಗುತ್ತದೆ. ಭವಿಷ್ಯದಲ್ಲಿ ಇದರಿಂದ ಏನಾಗಬಹುದು ಎಂಬ ಯೋಚನೆ ಇರೋದಿಲ್ಲ. ಅಲ್ಲದೆ, ಸುಳ್ಳು ಹೇಳಲು ಮೆದುಳು ತುಂಬಾನೇ ಚುರುಕಾಗಿರಬೇಕು ಮತ್ತು ದೊಡ್ಡ ಕಥೆ ಕಟ್ಟಬೇಕು. ಅಮಲಿನಲ್ಲಿ ಮೆದುಳು ಮಂದವಾಗಿರುವುದರಿಂದ, ಸುಳ್ಳು ಹೇಳುವುದಕ್ಕಿಂತ ಇರೋದನ್ನು ಹಾಗೇ ಹೇಳೋದು ಸುಲಭ ಅನಿಸುತ್ತದೆ.
ಕುಡಿದವರು ಆಡುವ ಮಾತುಗಳೆಲ್ಲವೂ ಸತ್ಯವಾಗಿರೋದಿಲ್ಲ. ಇದಕ್ಕೆ ಕಾರಣಗಳು ಇಲ್ಲಿವೆ:
ಅತಿರೇಕದ ಭಾವನೆಗಳು: ಅಮಲಿನಲ್ಲಿ ಪ್ರೀತಿ ಅಥವಾ ಕೋಪ ಅತಿ ಹೆಚ್ಚಾಗಿರುತ್ತದೆ. ಅದು ಆ ಕ್ಷಣದ ಗಮ್ಮತ್ತೇ ಹೊರತು, ಶಾಶ್ವತ ಭಾವನೆಯಲ್ಲ.
ಸುಳ್ಳು ಹಾಗೂ ಕಟ್ಟುಕಥೆಗಳು: ಕೆಲವೊಮ್ಮೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕುಡಿದವರೂ ಸುಳ್ಳು ಆಡುತ್ತಾರೆ. ಅಮಲಿನಲ್ಲಿ ನೆನಪುಗಳು ಮಸುಕಾದಾಗ (Blackouts), ತಾವು ಕಲ್ಪಿಸಿಕೊಂಡಿದ್ದೇ ಸತ್ಯ ಅಂತ ನಂಬಿ ಮಾತನಾಡುತ್ತಾರೆ.
ಪೊಳ್ಳು ಭರವಸೆಗಳು: ನಮಗೆ ಮಾಡಲು ಸಾಧ್ಯವಿಲ್ಲದ ಕೆಲಸಗಳನ್ನು ಸಹ ಕುಡಿದಾಗ ದೊಡ್ಡ ಆತ್ಮವಿಶ್ವಾಸದಿಂದ ಮಾಡುತ್ತೇನೆ ಎಂದು ಮಾತು ಕೊಡುವುದು ಸರ್ವೆ ಸಾಮಾನ್ಯ.
ಕುಡಿದವರು ಆಡುವ ಮಾತುಗಳು ಅವರ ಮನಸ್ಸಿನ ಆಳದ ಮಾತೂ ಆಗಿರಬಹುದು ಅಥವಾ ಆ ಕ್ಷಣದ ಅಮಲಿನ ಹೈಪ್ ಕೂಡ ಆಗಿರಬಹುದು. ಹಾಗಾಗಿ, ಕುಡಿದಾಗ ಆಡಿದ ಮಾತನ್ನೆಲ್ಲಾ ಕಣ್ಣು ಮುಚ್ಚಿಕೊಂಡು ನಂಬುವ ಬದಲು, ಅವರು ನಾರ್ಮಲ್ ಆದ ಮೇಲೆ ಅದರ ಬಗ್ಗೆ ಯೋಚಿಸುವುದು ಜಾಣತನ.