

ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯ, ಅನ್ಯಾಯದ ವಿರುದ್ಧ ಹೋರಾಡಿದ ಕಿತ್ತೂರು ಸಂಸ್ಥಾನದ ಅಪ್ರತಿಮ ವೀರ ಸಂಗೊಳ್ಳಿ ರಾಯಣ್ಣನ ಬದುಕು ಹಾಗೂ ಹೋರಾಟದ ಕಿಚ್ಚನ್ನು ಮುಂದಿನ ಪೀಳಿಗೆಗೆ ಕಾಯ್ದಿರಿಸುವ ಉದ್ದೇಶದಿಂದ ರಾಕ್ ಗಾರ್ಡನ್ ಸಿದ್ಧವಾಗುತ್ತಿದೆ.
ನಂದಘಡದ ಸಮಾಧಿ ಸ್ಥಳ ಹೊರತುಪಡಿಸಿ ರಾಯಣ್ಣನ ಬದುಕನ್ನು ವಿವರಿಸುವಂತಹ ಐತಿಹಾಸಿಕ ಸ್ಥಳಗಳಿಲ್ಲ. ಅದನ್ನು ಮನಗಂಡೇ ಹಿಂದಿನ ಸಿದ್ದರಾಮಯ್ಯ ಸರ್ಕಾರ 267 ಕೋಟಿ ರೂ.ಗಳ ಅನುದಾನದೊಂದಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ರಚಿಸಿತ್ತು. 110 ಎಕರೆಯಲ್ಲಿ ಪ್ರಾಧಿಕಾರದ ಮೂಲಕ ಸೈನಿಕ ಶಾಲೆ, ರಾಕ್ ಗಾರ್ಡನ್, ಕೆರೆಯ ಅಭಿವೃದ್ಧಿ, ಮ್ಯೂಸಿಯಂ ಇತರೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯ ಹೊರವಲಯದ ಹತ್ತು ಎಕರೆ ವಿಸ್ತೀರ್ಣದಲ್ಲಿ ರಾಕ್ ಗಾರ್ಡನ್ ತಲೆ ಎತ್ತುತ್ತಿದೆ. ರಾಜ್ಯದಲ್ಲಿ ಹಲವು ರಾಕ್ ಗಾರ್ಡನ್ಗಳಿದ್ದರೂ ದೇಶಕ್ಕಾಗಿ ಸಮರ್ಪಿಸಿಕೊಂಡ ಹೋರಾಟಗಾರನೊಬ್ಬನ ಇಡೀ ಬದುಕನ್ನು ಕಟ್ಟಿಕೊಡುವುದರಿಂದ ಇದು ವಿಭಿನ್ನವಾಗಲಿದೆ. ರಾಯಣ್ಣನ ಅಜ್ಜ ರೋಗಪ್ಪ ಅವರ ಜೀವನದಿಂದ ಪ್ರಾರಂಭವಾಗಿ ರಾಯಣ್ಣನ ಬಲಿದಾನದೊಂದಿಗೆ ಕೊನೆಗೊಳ್ಳುತ್ತದೆ.
ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟ ಅವರ ಮಾರ್ಗದರ್ಶನದಲ್ಲಿ ಹರ್ಷರಾಜ ಸೊಲಬಕ್ಕನವರ ಅವರ ಶಿಲ್ಪ ಕಲಾ ಕುಟೀರದ ಕಲಾವಿದರ ತಂಡದಿಂದ ರಾಕ್ ಗಾರ್ಡನ್ ನಿರ್ವಣವಾಗಿದೆ. ಇದಕ್ಕೆ ಕಥೆ ಮತ್ತು ಸನ್ನಿವೇಶ ಪರಿಕಲ್ಪನೆಯನ್ನು ಸಂಗೊಳ್ಳಿ ಗ್ರಾಮದ ಬಸವರಾಜ ಕಮತ ಅವರು ನೀಡಿದ್ದಾರೆ.
ಏನೇನಿದೆ?:
ಪ್ರವೇಶದ್ವಾರ ಪ್ರಾಚೀನ ಶೈಲಿಯ ಕಪ್ಪು ಕಲ್ಲಿನ ಕೋಟೆ ಮಾದರಿಯಲ್ಲಿದೆ. ಮುಂಭಾಗದಲ್ಲಿಯೇ ಕುದುರೆ ಮೇಲಿರುವ ರಾಯಣ್ಣನ ಪ್ರತಿಮೆ ಗಮನ ಸೆಳೆಯುತ್ತದೆ. ಒಳಗಡೆ ಕಿತ್ತೂರು ಸಂಸ್ಥಾನದ ಅರಮನೆಯನ್ನು ಮೂಲ ಶೈಲಿಯಲ್ಲಿಯೇ ಯಥಾವತ್ತಾಗಿ ನಿರ್ಮಾಣ ಮಾಡಲಾಗಿದೆ.
ಕಿತ್ತೂರು ಸಂಸ್ಥಾನದ ವೀರಪ್ಪ ದೇಸಾಯಿ ಅವರ ದರ್ಬಾರ್ ಸನ್ನಿವೇಶದಿಂದ ಇಲ್ಲಿನ ಕಥೆ ಆರಂಭವಾಗುತ್ತದೆ. ಈ ದರ್ಬಾರ್ ಹಾಲ್ನಲ್ಲಿ ವೀರಪ್ಪ ದೇಸಾಯಿ ಸಂಗೊಳ್ಳಿ ರಾಯಣ್ಣನ ಅಜ್ಜ ರೋಗಪ್ಪ ಅವರಿಗೆ ಸಾವಿರ ಒಂಟೆಯ ಸರ್ದಾರ್ ಎಂಬ ಬಿರುದು ನೀಡಿ ರಕ್ತಮಾನ್ಯ ಭೂಮಿಯನ್ನು ಬಳುವಳಿಯಾಗಿ ನೀಡುವ ಸನ್ನಿವೇಶ ಇದೆ. ಈ ಭೂಮಿಯಲ್ಲಿರುವ ಶ್ರೀ ಮಲ್ಲೇಶಪ್ಪ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಸಾಗುವಳಿ ಮಾಡುವ ಹಿನ್ನೆಲೆ, ರೋಗಪ್ಪ ಅವರು ಜನರಿಗೆ ನಾಟಿ ಔಷಧಿ ನೀಡುವುದು, ಸಂಗೊಳ್ಳಿ ರಾಯಣ್ಣನ ತಂದೆ ಭರಮಪ್ಪ ಕಾಡಿನಲ್ಲಿ ಹುಲಿ ಕೊಲ್ಲುವುದು, ಅದರ ಕಳೇಬರವನ್ನು ಕಿತ್ತೂರು ಆಸ್ಥಾನದ ಮಲ್ಲಸರ್ಜ ದೇಸಾಯಿ ಹತ್ತಿರ ತೆಗೆದುಕೊಂಡು ಬರುತ್ತಿರುವುದು, ಸಂಗೊಳ್ಳಿ ರಾಯಣ್ಣನ ತೊಟ್ಟಿಲು ಕಾರ್ಯಕ್ರಮ, ಕುಸ್ತಿ, ಕುದುರೆ ಸವಾರಿ, ಕುಸ್ತಿ ಸ್ಪರ್ಧೆಯಲ್ಲಿ ವಿಜಯ ಸಾಧಿಸುವುದು, ಆಂಜನೇಯ ದೇವಸ್ಥಾನ, ಸಂಗೊಳ್ಳಿ ಅರಮನೆಯಲ್ಲಿ ಕಿತ್ತೂರು ಚೆನ್ನಮ್ಮ ಕಿತ್ತೂರು ಖಡ್ಗವನ್ನು ಸಂಗೊಳ್ಳಿ ರಾಯಣ್ಣಗೆ ನೀಡುವ ಸನ್ನಿವೇಶಗಳನ್ನು ಅದ್ಬುತವಾಗಿ ನಿರ್ವಿುಸಲಾಗಿದೆ. ಕಿತ್ತೂರು ಅರಮನೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ಥ್ಯಾಕರೆ ದತ್ತು ಮಕ್ಕಳಿಗೆ ಉತ್ತರಾಧಿಕಾರಿ ಹಕ್ಕು ಇಲ್ಲವೆಂದು ದತ್ತಕ ನಿರಾಕರಿಸುವುದು, ಆಂಗ್ಲೊ-ಕಿತ್ತೂರ ಪ್ರಥಮ ಯುದ್ದ, ಕಿತ್ತೂರು ವಿಜಯೋತ್ಸವ, ದ್ವಿತೀಯ ಆಂಗ್ಲೊ-ಕಿತ್ತೂರ ಯುದ್ದ, ರಾಣಿ ಚೆನ್ನಮ್ಮ ಮತ್ತು ಪರಿವಾರ ಬಂಧನ, ಸಂಗೊಳ್ಳಿ ರಾಯಣ್ಣ ಬಂಧನ, ಜಂಗಮ ವೇಷದಲ್ಲಿ ಗೃಹಬಂಧನದಲ್ಲಿ ಇರುವ ರಾಣಿ ಚೆನ್ನಮ್ಮ ಅವರನ್ನು ಭೇಟಿಯಾಗುವುದು, ಸಂಗೊಳ್ಳಿ ರಾಯಣ್ಣ ಮತ್ತು ಸಂಗಡಿಗರು ಯುದ್ಧದ ಕುರಿತು ಚಿಂತನೆ ನಡೆಸುವುದು, ರಾಣಿ ಚೆನ್ನಮನ ಸಮಾಧಿ ದರ್ಶನ ಪಡೆಯುವ ಸನ್ನಿವೇಶಗಳಿವೆ. ಸಂಗೊಳ್ಳಿ ಗ್ರಾಮದಲ್ಲಿ ರಾಯಣ್ಣ ತನ್ನ ರಕ್ತಮಾನ್ಯ ಜಮೀನಿನಲ್ಲಿ ಕರ ನಿರಾಕರಿಸುವ ಮೂಲಕ ಇನಾಂ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವುದು, ಸಂಗೊಳ್ಳಿ ರಾಯಣ್ಣನ ಬಂಧನ ಮತ್ತು ವೀರಮಾತೆ ಕೆಂಚಮ್ಮ ಅವರು ಸಂಗೊಳ್ಳಿ ಚಾವಡಿಯಲ್ಲಿ ಕಂದಾಯ ನಿರಾಕರಿಸುವ ಮೂಲಕ ಆಂಗ್ಲ ಸರ್ಕಾರದ ಇನಾಂ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವುದು, ಅವರ ಬೆನ್ನಿನ ಮೇಲೆ ಸುಂಕದ ಕಲ್ಲು ಹೇರುವ ಸನ್ನಿವೇಶವಿದೆ. ಸಂಗೊಳ್ಳಿ ಗ್ರಾಮದಲ್ಲಿ ಆಂಗ್ಲರ ವಿರುದ್ಧ ಹೋರಾಡುವುದು, ಸುರಪುರ ಕೃಷ್ಣಪನಾಯಕರ ಭೇಟಿ, ಆಂಗ್ಲರ ಖಾನಾಪುರ ಸೇನಾ ಠಾಣೆ ಮುತ್ತಿಗೆ, ಹಳಿಯಾಳ ಖಜಾನೆ ಲೂಟಿ, ಡೋರಿ ಹಳ್ಳದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ಸಂಗಡಿಗರ ಬಂಧನ, ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ, ಮರಣ ದಂಡನೆ, ಸಮಾಧಿ ಸ್ಥಳದ ಮೇಲೆ ಆಲದ ಸಸಿ ನೆಡುವುದು, ಈ ರೀತಿ ಹತ್ತು ಹಲವಾರು ಸನ್ನಿವೇಶಗಳಲ್ಲಿ ಇಡೀ ಕಿತ್ತೂರಿನ ಇತಿಹಾಸವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಒಟ್ಟಾರೆ 1600ಕ್ಕೂ ಹೆಚ್ಚಿನ ಮೂರ್ತಿಗಳಿವೆ.
ಡಿಜಿಟಲ್ ಮಾಹಿತಿ:
ಮೂರ್ತಿಗಳನ್ನು ಸ್ಥಾಪಿಸಿರುವ ಪ್ರದೇಶದ ಮುಂದೆ ನಿಂತು ಅಲ್ಲಿರುವ ಸ್ವಿಚ್ ಆನ್ ಮಾಡಿದರೆ ಆ ಸನ್ನಿವೇಶದ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಹೊರಗಡೆಯಲ್ಲಿ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾಹಿತಿಯ ಫಲಕ ಅಳವಡಿಸಲಾಗುತ್ತದೆ.
ಮೂಲಸೌಕರ್ಯಕ್ಕೂ ಆದ್ಯತೆ:
ರಾಕ್ ಗಾರ್ಡನ್ ನಿರ್ವಣವಾಗು ವಲ್ಲಿ ಇದೆ. ಆದರೆ ಇಲ್ಲಿ ಮೂಲಸೌಕರ್ಯದ ಕೊರತೆ ವ್ಯಾಪಕವಾಗಿದೆ. ಉತ್ತಮ ರಸ್ತೆ ಇಲ್ಲ. ಹೋಟೆಲ್ಗಳಿಲ್ಲ, ಬಸ್ನ ವ್ಯವಸ್ಥೆಯೂ ಸರಿಯಾಗಿಲ್ಲ. ಮೂಲಸೌಕರ್ಯದ ಕಡೆ ಆದ್ಯತೆ ನೀಡಲು ಪ್ರಾಧಿಕಾರ ಯೋಜನೆ ರೂಪಿಸಿದೆ.
ಮ್ಯೂಸಿಯಂ: ನಂದಘಡದಲ್ಲಿ ರಾಯಣ್ಣನ ಬದುಕನ್ನು ತೋರಿಸುವಂತಹ ಮ್ಯೂಸಿಯಂ ಸಹ ಸಿದ್ಧವಾಗುತ್ತದೆ. ರಾಕ್ ಗಾರ್ಡನ್ ಜತೆಗೆ ಅದು ಸಹ ಉದ್ಘಾಟನೆಯಾಗಲಿದೆ.
ತಲುಪುವುದು ಹೇಗೆ?
ಜಿಲ್ಲಾ ಕೇಂದ್ರವಾದ ಬೆಳಗಾವಿಯಿಂದ ರಾಕ್ ಗಾರ್ಡನ್ಗೆ 49 ಕಿಮೀ ದೂರ. ಕಿತ್ತೂರಿನಿಂದ 13 ಕಿಮೀ, ಸವದತ್ತಿ ಯಿಂದ 38 ಕಿಮೀ, ನಂದಘಡದಿಂದ 41.4 ಕಿಮೀ ದೂರದಲ್ಲಿದೆ.
ಸಂಗೊಳ್ಳಿ ರಾಯಣ್ಣನ ಹೋರಾಟವನ್ನು ಮುಂದಿನ ಪೀಳಿಗೆಗೆ ಉಳಿಸುವ ಸಲುವಾಗಿ ರಾಕ್ ಗಾರ್ಡನ್ ರೂಪಿಸಲಾಗಿದ್ದು, ಎರಡು ತಿಂಗಳೊಳಗೆ ಉದ್ಘಾಟನೆಯಾಗಲಿದೆ. ಅಲ್ಲಿ ಎಲ್ಲ ಮೂಲಸೌಕರ್ಯ ಒದಗಿಸಲಾಗುತ್ತದೆ. ರಾಜ್ಯದ ಪ್ರಮುಖ ಪ್ರವಾಸಿ ಸ್ಥಳ ಆಗಲಿದೆ.
| ಹೊರಪೇಟೆ ಮಲ್ಲೇಶಪ್ಪ ಆಯುಕ್ತರು, ಸಂಗೊಳ್ಳಿ ರಾಯಣ್ಣ ಕ್ಷೇತ್ರ ವೃದ್ಧಿ ಪ್ರಾಧಿಕಾರ