

ಭದ್ರಾವತಿ: ಎಂಎಲ್ಸಿ ಸಿ.ಎಂ.ಇಬ್ರಾಹಿಂ ಅವರ ಸಹೋದರ ಸಿ.ಎಂ.ಖಾದರ್ ನಿವಾಸದಲ್ಲಿ ಕಳ್ಳತನವಾಗಿದ್ದು, ಕಳ್ಳರು ಬರೋಬ್ಬರಿ 23.35 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ಕದ್ದೊಯ್ದಿದ್ದಾರೆ.
ನಗರದ ಅಮೀರ್‌ಜಾನ್ ಕಾಲನಿಯಲ್ಲಿರುವ ಸಿ.ಎಂ.ಖಾದರ್ ತನ್ನ ಕುಟುಂಬದ ಸಂಬಂಧಿಗಳೊಂದಿಗೆ ದುಬೈಗೆ ಹೋಗಿದ್ದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದ್ದು, ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.5ರಂದು ಸಿ.ಎಂ.ಖಾದರ್ ದುಬೈಗೆ ತೆರಳಿದ್ದು, ಅವರ ಕಾರಿನ ಚಾಲಕ ಕೇಶವ ಹಾಗೂ ವ್ಯವಹಾರಿಕ ಕಚೇರಿ ಸಿಬ್ಬಂದಿ ಮುಬಾರಕ್ ಮನೆಯನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಫೆ.13ರ ಬೆಳಗ್ಗೆ ಮನೆಗೆ ಬಂದ ಮುಬಾರಕ್ ಮನೆಯ ಕಿಟಕಿಯ ಗ್ರಿಲ್ ಕೆಳಗೆ ಬಿದ್ದಿರುವುದು ಹಾಗೂ ಮನೆಯ ಹಿಂಬಾಗಿಲು ತೆರೆದಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ದುಬೈನಲ್ಲಿದ್ದ ಖಾದರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸಿಬ್ಬಂದಿಯ ಕರೆಯ ಮೇರೆಗೆ ದುಬೈನಿಂದ ಭದ್ರಾವತಿ ನಗರಕ್ಕೆ ಬಂದ ಖಾದರ್, ಅಮೀರ್ ಜಾನ್ ಕಾಲನಿಯಲ್ಲಿರುವ ತನ್ನ ನಿವಾಸಕ್ಕೆ ಹೋಗಿ ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ದೃಢಪಟ್ಟಿದೆ. ಖಾದರ್ ಅವರ ತಮ್ಮನ ರೂಮಿನಲ್ಲಿದ್ದ ಬೀರುವಿನಿಂದ 45 ಸಾವಿರ ನಗದು ಹಾಗೂ ಮೊಬೈಲ್, ಖಾದರ್ ರೂಮಿನಲ್ಲಿದ್ದ ಬೀರುವಿನಿಂದ ಬಂಗಾರದ ಆಭರಣ, ಎರಡು ಟಿವಿ, ಮೊಬೈಲ್ ಸೇರಿದಂತೆ ಒಟ್ಟು 23.35,000 ರೂ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.