

ರಾಯಚೂರು: ಮಳೆ ನೀರು ತುಂಬಿ ಕೆಸರು ಗಂದೆಯಂತಾಗಿದ್ದ ಮಸ್ಕಿ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ಮುಖ್ಯರಸ್ತೆಯಲ್ಲಿ ಗದ್ದೆ ನಾಟಿ ಮಾಡುವ ಮೂಲಕ ಸ್ಥಳೀಯ ಯುವಕರು ಪ್ರತಿಭಟನೆ ನಡೆಸಿದರು.
ಕವಿತಾಳಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಹಾಳಾಗಿ ಎರಡು ವರ್ಷ ಕಳೆದರೂ ದುರಸ್ತಿ ಭಾಗ್ಯ ಸಿಕ್ಕಿಲ್ಲ. ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಗುಂಡಿ ಬಿದ್ದ ರಸ್ತೆಯಲ್ಲಿ ಮಳೆ ನೀರು ನಿಂತು ಮಿನಿ ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಾಗಿದೆ. ಆಸ್ಪತ್ರೆಗೆ ಹೋಗುವ ಗರ್ಭಿಣಿಯರು, ವೃದ್ಧರು, ಶಾಲಾ-ಕಾಲೇಜುಗಳಿಗೆ ತೆರಳುವ ಮಕ್ಕಳು ಇದೇ ರಸ್ತೆ ಅವಲಂಬಿಸಿದ್ದಾರೆ. ರಸ್ತೆ ಹಾಳಾಗಿದ್ದು, ಜನರನ್ನು ಬಲಿ ಪಡೆಯುಂತೆ ಈ ರಸ್ತೆ ಭಾಸವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತೆ ಎಂದು ಎಚ್ಚರಿಸಿದರು. ರಸ್ತೆಯಲ್ಲಿ ಭತ್ತ ನಾಟಿ ಮಾಡಿ ಆಕ್ರೋಶ ಹೊರಹಾಕಿದರು.