ಬೆಂಗಳೂರು ವಿವಿಯಲ್ಲಿ ಮಾಜಿ ಪ್ರಧಾನಿ ಹೆಸರಲ್ಲಿ ಸಂಶೋಧನಾ ಕೇಂದ್ರ

Manmohan Singh
Published on

ಬೆಂಗಳೂರು: ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಸ್ಮರಣಾರ್ಥ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ, ಸಂಶೋಧನಾ ಕೇಂದ್ರ ತೆರೆಯಲು ಅಗತ್ಯ ಕ್ರಮ ವಹಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉನ್ನತ ಶಿಕ್ಷಣ ಸಚಿವರು ಹಾಗೂ ಬೆಂಗಳೂರು ವಿವಿ ಕುಲಪತಿಗೆ ಸೂಚನೆ ನೀಡಿದ್ದಾರೆ.

ಈ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಜಾರಿ ಮಾಡಿದ ಯೋಜನೆಗಳ ಕುರಿತು ಮಾಹಿತಿ ಶಾಶ್ವತವಾಗಿ ಮುಂದಿನ ಪೀಳಿಗೆಗೆ ತಲುಪುವಂತೆ ಮಾಡಲು ಅವುಗಳ ಬಗ್ಗೆ ಅಧ್ಯಯನ ಮಾಡಿ, ಸಂಶೋಧನೆ ಮಾಡಿ ದಾಖಲಾತಿ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದು ತಿಳಿಸಿದ್ದಾರೆ.

ಡಾ.ಮನಮೋಹನ ಸಿಂಗ್ ಅವರು ವಿಶ್ವದ ಅತ್ಯಂತ ಶ್ರೇಷ್ಠ ಆರ್ಥಿಕ ತಜ್ಞರು. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಜಾಗತೀಕರಣ, ಉದಾರೀಕರಣ, ಆರ್ಥಿಕ ನೀತಿಗಳು, ಆಡಳಿತದಲ್ಲಿ ಶಿಸ್ತು ಭಾರತವನ್ನು ಆರ್ಥಿಕವಾಗಿ ಸದೃಢವಾಗಿಸಲು ಕಾರಣವಾಯಿತು ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ), ಆಹಾರ ಭದ್ರತಾ ಕಾಯ್ದೆ ಮುಂತಾದವುಗಳು, ಆಧಾರ ಕಾರ್ಡ್ ವಿಶಿಷ್ಟ ಗುರುತಿನ ಚೀಟಿಯ ಯೋಜನೆ, ಹೀಗೆ ಹತ್ತು ಹಲವು ಕಾಯ್ದೆ ಮತ್ತು ಯೋಜನೆಗಳು ವಿಶ್ವಕ್ಕೇ ಮಾದರಿಯಾಗಿವೆ.

ಭವಿಷ್ಯದ ಪೀಳಿಗೆಗೆ ಅವರ ಆರ್ಥಿಕ ನೀತಿಗಳನ್ನು, ದೇಶ ಸುಧಾರಣಾ ಕ್ರಮಗಳನ್ನು ತಿಳಿಸಿಕೊಡಬೇಕಿದೆ ಹಾಗೂ ಅವರ ಆಡಳಿತ ಮತ್ತು ಆರ್ಥಿಕ ನೀತಿಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಯಬೇಕಿದೆ ಎಂದು ಅಭಿಪ್ರಾಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net