ಕೆಜಿಎಫ್​ನಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಕಾಮುಕನಿಗೆ 30 ವರ್ಷ ಜೈಲು ಶಿಕ್ಷೆ!

kolar court
Published on

ಕೋಲಾರ: ಕೆಜಿಎಫ್​ನ ಮಂಜುನಾಥ ನಗರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಯುವಕನಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 30 ವರ್ಷ ಕಠಿಣ ಸಜೆ ಮತ್ತು 22 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

2019ರ ಅ.10ರಂದು ಮನೆಯಲ್ಲಿ ಒಂಟಿಯಾಗಿದ್ದ ಅಪ್ರಾಪ್ತೆ ಮೇಲೆ 26 ವರ್ಷದ ಯುವಕ ಕುಟ್ಟಿ ಅಲಿಯಾಸ್​ ತಮಿಳರಸನ್ ಅತ್ಯಾಚಾರವೆಸಗಿದ್ದ. ಈ ಸಂಬಂಧ ಕೆಜಿಎಫ್​ನ ರಾರ್ಬಟ್​ಸನ್​ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಠಾಣೆ ಇನ್​ಸ್ಪೆಕ್ಟರ್​ ಎಂ.ಸೂರ್ಯಪ್ರಕಾಶ್​ ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ ಶಿಕ್ಷೆ ವಿಧಿಸಿದೆ. ನಿನ್ನೆ(ಬುಧವಾರ) ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಬಿ.ಪಿ.ದೇವಮಾನೆ ಅವರು ಅಪರಾಧಿಗೆ 30 ವರ್ಷ ಕಠಿಣ ಸಜೆ ಮತ್ತು 22 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರದ ವಿಶೇಷ ಅಭಿಯೋಜಕ ಎಸ್​. ಮುನಿಸ್ವಾಮಿಗೌಡ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net