

ತಲಕಾಡು: ಮಗು ಸತ್ತ ನೋವಿನಲ್ಲೇ ಕಾವೇರಿ ನದಿಯಲ್ಲಿ ಸ್ನಾನ ಮಾಡಲೆಂದು ಬಂದ ತಂದೆಯೂ ದುರಂತ ಅಂತ್ಯ ಕಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಎಲ್ಲವೂ ಚೆನ್ನಾಗಿದ್ದಿದ್ದರೆ ಇನ್ನೆರಡು ತಿಂಗಳಿಗೆ ಆ ಮನೆಯಲ್ಲಿ ಮಗುವಿನ ಆಗಮನ ಆಗುತ್ತಿತ್ತು. ಸಂಭ್ರಮದಲ್ಲಿ ಇಡೀ ಕುಟುಂಬ ಮುಳುಗುತ್ತಿತ್ತು. ಆದರೆ, ಆ ದುರ್ವಿಧಿ ಎಲ್ಲವನ್ನೂ ಮಣ್ಣಾಗಿಸಿದೆ. ಇತ್ತ ತಾಯಿ ಹೊಟ್ಟೆಯಲ್ಲೇ 7 ತಿಂಗಳ ಮಗು ಸತ್ತಿದ್ದು, ಇದಾದ ಮೂರು ದಿನಕ್ಕೆ ತಂದೆಯೂ ದುರಂತ ಅಂತ್ಯ ಕಂಡಿದ್ದಾರೆ. ಮಗು ಕಳೆದುಕೊಂಡ ನೋವಿನಲ್ಲಿದ್ದ ತಾಯಿಗೆ ಗಂಡ ಸಾವು ಬರಸಿಡಿಲಿನಂತೆ ಬಂದೆರಗಿದೆ...
ಇಂತಹ ಕರುಣಾಜನಕ ಘಟನೆ ತಲಕಾಡುನಲ್ಲಿ ಸಂಭವಿಸಿದೆ. ಬೆಂಗಳೂರಿನ ಶ್ರೀನಗರ ಬಡಾವಣೆಯ ರಾಘವೇಂದ್ರ ಬ್ಲಾಕ್ 3ನೇ ಮುಖ್ಯರಸ್ತೆ ನಿವಾಸಿ ಷಣ್ಮುಖ (35) ಮೃತರು. ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಇವರು, ಬೆಂಗಳೂರಿನಲ್ಲಿ ಸಲೂನ್ ಶಾಪ್ ಇಟ್ಟುಕೊಂಡಿದ್ದರು. ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದರು. ಮಗುವಿನ ನಿರೀಕ್ಷೆಯಲ್ಲಿದ್ದ ಗಂಡ-ಹೆಂಡತಿ ಬಾಳಲ್ಲಿ ಕಳೆದ ವಾರ ದುರಂತ ಸಂಭವಿಸಿತ್ತು. ಪತ್ನಿಗೆ ಅಬಾರ್ಷನ್ ಆಗಿ ಮಗು ಸತ್ತಿತ್ತು. ಅದರ ಸೂತಕ ಕಳೆಯಲೆಂದು ಮತ್ತು ತಲಕಾಡು ದೇಗುಲ ದರ್ಶನ ಮಾಡಲೆಂದು ಪತ್ನಿಯ ತವರೂರಾದ ಸಮೀಪದ ಜಾಲಹಳ್ಳಿಯಿಂದ ಕುಟುಂಬಸ್ಥರೊಂದಿಗೆ ಆಗಮಿಸಿದ್ದ ಷಣ್ಮುಖ, ನದಿಯಲ್ಲಿ ಸ್ನಾನ ಮಾಡುತ್ತಿದ್ದರು.
ತಲಕಾಡು-ಹೆಮ್ಮಿಗೆ ಸೇತುವೆ ಕೆಳಗೆ ಕಾವೇರಿ ನದಿಯಲ್ಲಿ ಮಂಗಳವಾರ ಸ್ನಾನ ಮಾಡುತ್ತಿದ್ದ ಷಣ್ಮುಕ ಆಯತಪ್ಪಿ ಆಳದ ಪ್ರದೇಶಕ್ಕೆ ಜಾರಿ ಬಿದ್ದು ಮೃತಪಟ್ಟಿದ್ದಾರೆ. ತಲಕಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವ ನೀಡಲಾಯಿತು.
ಮಗು ಕಳೆದುಕೊಂಡು ನೋವಲ್ಲಿದ್ದ ಪತ್ನಿಗೆ ಗಂಡನ ಸಾವು ಮತ್ತಷ್ಟು ನೋವು ತಂದಿದೆ. ಎಲ್ಲವನ್ನೂ ಕಳೆದುಕೊಂಡ ಆಕೆಯ ಆಕ್ರಂದನ ಮುಗಿಲು ಮುಟ್ಟಿತ್ತು. 'ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ? ನನ್ನ ಹೊಟ್ಟೆಯಲ್ಲಿದ್ದ 7 ತಿಂಗಳ ಮಗುವನ್ನೂ ಕಿತ್ತುಕೊಂಡೆ.. ಈಗ ನನ್ನ ಗಂಡನ ಪ್ರಾಣವನ್ನೂ ತೆಗೆದೆ... ನಾನೇನು ಮಾಡಲಿ ಈಗ...' ಎಂದು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.