

ರಾಯಚೂರು: ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕು ಎಂದು ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿಕೆ ನೀಡಿದ ಬೆನ್ನಲ್ಲೇ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿದ್ದವು. ಇದೀಗ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್ ಅವರು ತೆಲಂಗಾಣಕ್ಕೆ ರಾಯಚೂರು ಸೇರ್ಪಡೆ ಬೇಡ ಎನ್ನುವ ಮೂಲಕ ಚರ್ಚೆಗೆ ಪೂರ್ಣ ವಿರಾಮ ಹಾಕಿದ್ದಾರೆ.
ಇತ್ತೀಚೆಗೆ ಸಚಿವ ಪ್ರಭು ಚವ್ಹಾಣ ನಗರಕ್ಕೆ ಆಗಮಿಸಿದ ಸಂದರ್ಭ ಅಭಿವೃದ್ಧಿ ವಿಷಯದಲ್ಲಿ ರಾಯಚೂರು ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳುತ್ತಾ ಭಾವೋದ್ವೇಗಕ್ಕೆ ಒಳಗಾಗಿದ್ದ ಶಾಸಕ ಡಾ.ಶಿವರಾಜ ಪಾಟೀಲ್, ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎನ್ನುವ ಮಾತುಗಳನ್ನಾಡಿದ್ದರು. ಈ ಹೇಳಿಕೆಯನ್ನು ಸ್ವಾಗತಿಸುವ ಮೂಲಕ ತೆಲಂಗಾಣದ ಗದ್ವಾಲ್ ಶಾಸಕ ಬಿ.ಕೃಷ್ಣಮೋಹನ ರೆಡ್ಡಿ, ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿದಲ್ಲಿ ದೇಶವೇ ಅಚ್ಚರಿ ಪಡುವಂತೆ ಅಭಿವೃದ್ಧಿ ಪಡಿಸಿ ತೋರಿಸುತ್ತೇವೆ ಎಂದಿದ್ದರು. ಅಲ್ಲದೆ ಇದರ ಜತೆಗೆ ಕಲಬುರಗಿ, ಬೀದರ್ ಜಿಲ್ಲೆಗಳನ್ನೂ ತೆಲಂಗಾಣಕ್ಕೆ ಸೇರಿಸಬೇಕು ಎಂದಿದ್ದರು. ಮೂರೂ ಜಿಲ್ಲೆಗಳ ಶಾಸಕರು ಮತ್ತು ಮುಖಂಡರು ಕರ್ನಾಟಕದ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ ಈ ಜಿಲ್ಲೆಗಳನ್ನು ತೆಲಂಗಾಣಕ್ಕೆ ಸೇರಿಸುವಂತೆ ಒಪ್ಪಿಸಿದಲ್ಲಿ ನಾವು ತೆಲಂಗಾಣದ ಮುಖ್ಯಮಂತ್ರಿಯನ್ನು ಒಪ್ಪಿಸುತ್ತೇವೆ ಎಂದು ಬಿ.ಕೃಷ್ಣಮೋಹನ್ ರೆಡ್ಡಿ ಹೇಳಿದ್ದರು.
ಮತ್ತೊಂದೆಡೆ ಡಾ.ಶಿವರಾಜ ಪಾಟೀಲ್ ಹೇಳಿಕೆ ಖಂಡಿಸಿ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಹೋರಾಟ ನಡೆಸಿದ್ದವು. ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ತೆಲಂಗಾಣದಲ್ಲಿ ಸೋಮವಾರ ನಡೆದ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಚಂದ್ರಶೇಖರರಾವ್ ಮಾತನಾಡಿದ್ದು, ಡಾ.ಶಿವರಾಜ ಪಾಟೀಲರ ಹೇಳಿಕೆ ಉಲ್ಲೇಖಿಸಿ, ರಾಯಚೂರನ್ನು ತೆಲಂಗಾಣಕ್ಕೆ ಸೇರಿಸುವುದು ಬೇಡ ಎನ್ನುವ ಸ್ಪಷ್ಟ ಸಂದೇಶ ನೀಡಿದ್ದಾರೆ.
ತೆಲಂಗಾಣ ಉದಯದ ನಂತರದಲ್ಲಿ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ, ಇನ್ನೂ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಿಕೊಳ್ಳಲು ಮೊದಲು ಆದ್ಯತೆ ನೀಡೋಣ. ಪಕ್ಕದ ರಾಜ್ಯದ ಜಿಲ್ಲೆಗಳ ಸೇರ್ಪಡೆ ಬಗ್ಗೆ ಚಿಂತೆ ಮಾಡುವುದು ಬೇಡ ಎಂದಿದ್ದಾರೆ ಅಲ್ಲಿನ ಸಿಎಂ.
ಕ್ಷಮೆ ಕೇಳಿದ ಎಂಎಲ್ಎ: ರಾಯಚೂರು ಜಿಲ್ಲೆಗೆ ಪ್ರಾತಿನಿಧ್ಯ ಸಿಗಬೇಕು ಎನ್ನಬೇಕು ಎನ್ನುವ ದೃಷ್ಟಿಯಿಂದ ಕೋಪದಿಂದ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಹೇಳಿದ್ದೇನೆ ಎಂದು ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ತಿಳಿಸಿದ್ದಾರೆ. ಐಐಟಿ ಮತ್ತು ಏಮ್ಸ್ ಮಂಜೂರು ಮಾಡುವಲ್ಲಿ ಅನ್ಯಾಯವಾಗಿದೆ ಎನ್ನುವ ಉದ್ದೇಶದಿಂದ ಆ ಮಾತನ್ನು ಹೇಳಿದ್ದೆ. ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೇಳಿದಾಗ ಸಚಿವರು ಅನುದಾನದ ಕೊರತೆ ಬಗ್ಗೆ ಮಾತನಾಡಿದರು. ಆಗ ಈ ಮಾತನ್ನು ಆಡಿದೆ. ಕನ್ನಡ ನಾಡು, ಜಲ, ನೆಲಕ್ಕಾಗಿ ಪ್ರಾಣ ತ್ಯಾಗಕ್ಕೂ ನಾನು ಸಿದ್ಧನಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಡಾ.ಶಿವರಾಜ ಪಾಟೀಲ್ ತಿಳಿಸಿದ್ದಾರೆ.