

ಮುಂಬೈ: ಬಾಲಿವುಡ್ನ ಖ್ಯಾತ ಮ್ಯೂಸಿಕ್ ಕಂಪೋಸರ್, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಎರಡು ಬಾರಿ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಇದೀಗ ಅಚ್ಚರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದು, ಹಿಂದೆಂದೂ ಹೇಳದ ವಿಷಯವನ್ನು ಎಲ್ಲರ ಮುಂದೆ ಬಿಚ್ಚಿಟ್ಟಿರುವುದು ಸದ್ಯ ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅಷ್ಟಕ್ಕೂ ಮ್ಯೂಸಿಕ್ ಮಾಂತ್ರಿಕ ಈ ವಿಷಯ ಪ್ರಸ್ತಾಪಿಸಿದ್ದೇಕೆ? ಎಂಬುದರ ಕಾರಣ ಹೀಗಿದೆ.
ಇತ್ತೀಚೆಗೆ ಆಕ್ಸ್‌ಫರ್ಡ್ ಯೂನಿಯನ್ ಡಿಬೇಟಿಂಗ್ ಸೊಸೈಟಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಎ.ಆರ್. ರೆಹಮಾನ್, "ಚಿಕ್ಕ ವಯಸ್ಸಿನಲ್ಲಿ ನನಗೆ ಬಂದ ಆತ್ಮಹತ್ಯೆಯ ಆಲೋಚನೆಗಳನ್ನು ನನ್ನ ತಾಯಿ ನಿವಾರಿಸಿದರು. ಅವರು ಹೇಳಿದ ಆ ಅದ್ಭುತ ಮಾತುಗಳಿಂದ ಬಾಳಪಯಣದಲ್ಲಿ ಗಟ್ಟಿಯಾಗಿ ಸಾಗಲು ಕಾರಣ" ಎಂದು ಹೇಳಿದರು.
"ನಾನು ಚಿಕ್ಕವನಿದ್ದಾಗ ನನಗೆ ಆತ್ಮಹತ್ಯೆಯ ಆಲೋಚನೆಗಳು ಬಂದಾಗ, ನನ್ನ ತಾಯಿ ಹೇಳುತ್ತಿದ್ದರು, ನೀವು ಇತರರಿಗಾಗಿ ಬದುಕಿದಾಗ, ನಿಮಗೆ ಇಂತಹ ಆಲೋಚನೆಗಳು ಬರುವುದಿಲ್ಲ. ಇದು ನನ್ನ ತಾಯಿಯಿಂದ ನನಗೆ ದೊರೆತ ಅತ್ಯಂತ ಸುಂದರವಾದ ಸಲಹೆಗಳಲ್ಲಿ ಒಂದು. ನೀವು ಇತರರಿಗಾಗಿ ಬದುಕಿದಾಗ ಮತ್ತು ನೀವು ಸ್ವಾರ್ಥಿಗಳಾಗದೆ ಇದ್ದರೆ, ನಿಮ್ಮ ಜೀವನಕ್ಕೆ ಒಂದು ಅರ್ಥವಿದೆ" ಎಂದು ರೆಹಮಾನ್ ಹೇಳಿದ್ದಾರೆ.
ಯಾರಿಗಾದರೂ ಬರೆಯುವುದು, ಅಗತ್ಯವಿರುವವರಿಗೆ ಸಹಾಯ ಮಾಡುವುದು ಅಥವಾ ಸರಳವಾಗಿ ಕಿರುನಗೆಯನ್ನು ನೀಡುವಂತಹ ಸಣ್ಣ ಕಾರ್ಯಗಳ ಮಹತ್ವವನ್ನು ಒತ್ತಿ ಹೇಳಿದ ರೆಹಮಾನ್, "ನಮ್ಮ ಭವಿಷ್ಯದ ಬಗ್ಗೆ ನಮಗೆ ಸೀಮಿತ ಜ್ಞಾನವಿದೆ. ಮುಂದೆ ನಮಗಾಗಿ ಏನೋ ಒಂದು ವಿಶೇಷತೆ ಕಾಯುತ್ತಿರಬಹುದು ಅಲ್ವಾ" ಎಂದು ಹೇಳಿದ್ದಾರೆ. ಈ ವಿಷಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ,(ಏಜೆನ್ಸೀಸ್).