ರಾಮಮಂದಿರ ಉದ್ಘಾಟನೆಗೆ ಈ ರಾಜ್ಯದಿಂದ ಬಂತು ಬೃಹತ್​ ಗಾತ್ರದ ನಗಾರಿ! ಇದರ ತೂಕ ಎಷ್ಟು ಕೆಜಿಯಿದೆ ಗೊತ್ತೇ?

ವಿಜಯವಾಣಿ - 2024-01-12T074457.051
Published on

ಗುಜರಾತ್: ಜನವರಿ22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಲಿರುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಇದೀಗ ಅನೇಕ ರಾಜ್ಯಗಳಿಂದ ವಿಶೇಷ ಬಗೆ ಬಗೆಯ ಕೊಡುಗೆಗಳು ರಾಮಮಂದಿರವನ್ನು ತಲುಪುತ್ತಿದ್ದು, ಇದೀಗ ಈ ಸಾಲಿಗೆ ಗುಜರಾತ್‌ ಕೂಡ ಸೇರ್ಪಡೆಗೊಂಡಿದೆ. ದೇವಾಲಯದ ಕಾರ್ಯಕ್ಕೆ ಅಗತ್ಯವಿರುವ ವಿವಿಧ ವಸ್ತುಗಳನ್ನು ನೀಡುತ್ತ ಬಂದಿರುವ ಭಕ್ತರ ಪೈಕಿ ಇಲ್ಲೊಬ್ಬರು ಬೃಹತ್ ಗಾತ್ರದ ನಗಾರಿಯನ್ನು ಕೊಡುಗೆಯಾಗಿ ಅರ್ಪಿಸಿದ್ದಾರೆ.

500 ಕೆಜಿ ತೂಕವಿರುವ ಈ ನಗಾರಿ, ವಿಶೇಷ ರಥದಲ್ಲಿ ಗುರುವಾರದಂದು (ಜ.11) ಅಯೋಧ್ಯೆ ರಾಮಮಂದಿರಕ್ಕೆ ಆಗಮಿಸಿದೆ. ನಗಾರಿಯನ್ನು ಗುಜರಾತ್‌ನ ಕರ್ಣಾವತಿಯ ದರ್ಯಾಪುರ ವಿಸ್ತರಣೆಯಲ್ಲಿ ದಬ್ಗರ್ ಸಮುದಾಯದ ಜನರೇ ಸಿದ್ಧಪಡಿಸಿದ್ದಾರೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ರಾಮ ಮಂದಿರದ ಆವರಣದಲ್ಲಿ ಈ ಡ್ರಮ್​ ಅನ್ನು ಅಳವಡಿಸಲಾಗುವುದು ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ.

ಈ ನಗಾರಿಗೆ ಬಿಸಿಲು, ಮಳೆ ಲೆಕ್ಕಕ್ಕಿಲ್ಲ! ಕಾರಣ ಅದನ್ನು ತಡೆದುಕೊಳ್ಳುವಂತೆ ಸಿದ್ಧಪಡಿಸಲಾಗಿದೆ ಹಾಗೂ ಚಿನ್ನ ಮತ್ತು ಬೆಳ್ಳಿಯ ಪದರಗಳಿಂದ ಲೇಪಿತವಾಗಿದೆ. ಇದರ ಸದ್ದು ಕಿಲೋಮೀಟರ್ ದೂರದವರೆಗೂ ಕೇಳಿಸುತ್ತದೆ. ಕಬ್ಬಿಣ ಮತ್ತು ತಾಮ್ರದ ಫಲಕಗಳನ್ನು ಬಳಸಿ ಇದರ ರಚನೆಯನ್ನು ಮಾಡಲಾಗಿದೆ ಎಂದು ತಯಾರಕರು ತಿಳಿಸಿದ್ದಾರೆ.

ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು, ಕೈಗಾರಿಕೋದ್ಯಮಿಗಳು ಸೇರಿದಂತೆ 7,000ಕ್ಕೂ ಹೆಚ್ಚು ಜನರು ದೇವಸ್ಥಾನ ಟ್ರಸ್ಟ್, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net