

ಇಷ್ಟಲಿಂಗಕ್ಕೆ ರೂಪವನರ್ಪಿಸಿ, ದ್ರವ್ಯ ಶುದ್ಧವಾಯಿತೆಂದು
ಪ್ರಾಣಲಿಂಗಕ್ಕೆ ಆರೋಗಣೆಯನಿಕ್ಕುವಾಗ
ನಿಚ್ಚಕ್ಕೆ ನಿಚ್ಚ ಕಿಲ್ಬಿಷವೆಂದರಿಯರು
ಇಷ್ಟಲಿಂಗ- ಪ್ರಾಣಲಿಂಗದಾದಿ ಅಂತುವನಾರೂ ಅರಿಯರು
ಇದು ಕಾರಣ, ಗುಹೇಶ್ವರ, ನಿಮ್ಮ ಶರಣರು ಹಿಂದುಗಾಣದೆ ಮುಂದುಗೆಟ್ಟರು (ಅಲ್ಲಮ.ವ.ಚಂ-254)
ಭಕ್ತರು ಇಷ್ಟಲಿಂಗಕ್ಕೆ ರೂಪದ್ರವ್ಯವನ್ನು ಅರ್ಪಿಸುತ್ತಾರೆ. ಅವರು ಆ ರೂಪದ್ರವ್ಯವು ಶುದ್ಧವಾಯಿತೆಂದು ಭಾವಿಸಿಬಿಡುತ್ತಾರೆ. ಅನಂತರ ದ್ರವ್ಯದ ರುಚಿಯನ್ನು ಪ್ರಾಣಲಿಂಗಕ್ಕೆ ಆರೋಗಣೆ ಮಾಡುತ್ತಾರೆ. ಅವರ ಅರ್ಪಣೆಯ ಕ್ರಿಯೆ ಭಾವರಹಿತವೂ ಯಾಂತ್ರಿಕವೂ ಆಗಿರುತ್ತದೆ. ಆದುದರಿಂದ ಅದು ಫಲ ಕೊಡುವುದಿಲ್ಲ. ಅದು ‘ನಿಚ್ಚಕ್ಕೆ ನಿಚ್ಚ ಕಿಲ್ಬಿಷ’ ನೂರಕ್ಕೆ ನೂರು ಅಪ್ರಸಾದವೇ ಸರಿ. ಇಂಥವರು ಲಿಂಗದ ನೆಲೆಯನ್ನು ತಿಳಿದವರಲ್ಲ. ಇನ್ನು ಅರ್ಪಣಾ ಸ್ವರೂಪದ ರಹಸ್ಯವನ್ನು ಅವರು ಅರಿಯುವ ಬಗೆ ಯಾವುದು? ಹೀಗಾಗಿ, ‘ಶರಣರು ಹಿಂದುಗಾಣದೆ ಮುಂದುಗೆಟ್ಟರು’. ಈ ಮಾತಿನ ಮರ್ಮವನ್ನು ತುಸು ಒಳಗೆ ಇಳಿದು ನೋಡೋಣ! ಈ ವಿಶ್ವವು ಸ್ಥಾವರ ಜಂಗಮಾತ್ಮಕವಾದುದಷ್ಟೆ; ಇದಕ್ಕೆ ಆದಿ ಉಂಟು. ಇದರ ಹಿಂದಿರುವ ಮಹಲಿಂಗವು ಆದಿಯ ಆದಿಯಾಗಿದೆ. ಅಂತಹ ಲಿಂಗವನ್ನು ಭಕ್ತರು ತಿಳಿಯದೆ ಮುಂದೆ ದೊರೆಯುವ ಸಾಮರಸ್ಯದ ಅನುಭವವನ್ನು ಕಳೆದುಕೊಳ್ಳುತ್ತಾರೆ. ಲಿಂಗದ ನೆಲೆಯನ್ನು ಅರಿಯದೆ ಭವಕ್ಕೊಳಗಾಗುತ್ತಾರೆ. ಇದು ಶರಣರಲ್ಲದವರ ಸ್ಥಿತಿ. ನಿಜವಾದ ಶರಣರು ಸತ್ಯವನ್ನು ತಿಳಿದಿರುತ್ತಾರೆ. ಅವರಿಗೆ ಲಿಂಗದ ನೆಲೆ ತಿಳಿದಿರುತ್ತದೆ. ಅವರ ದೃಷ್ಟಿಯಲ್ಲಿ ಎಲ್ಲ ರೂಪು, ಲಿಂಗದ ರೂಪೇ ಆಗಿರುತ್ತದೆ. ಅಂಥವರಿಗೆ ಬಾಹ್ಯಾಂತರ ಬದುಕೆಂಬುದು ಪ್ರಸಾದ. ಆದುದರಿಂದ ಅವರು ಹಿಂದನ್ನು ಕಾಣರು. ಪೂರ್ವವಾಸನೆ ಅವರಲ್ಲಿ ಲವಲೇಶವೂ ಉಳಿದಿರುವುದಿಲ್ಲ. ಅವರು ಮುಂದುಗೆಟ್ಟರು. ಅಂದರೆ, ಮುಂದೆ ಬರಬಹುದಾದ ಭವವನ್ನು ಕೆಡಿಸಿಕೊಂಡು ಭವರಹಿತರಾದರು.
ಇದಿಷ್ಟು ಇಷ್ಟಲಿಂಗದ ನೆಲೆ. ಈ ನೆಲೆಯ ಪೂರ್ವಾಪರಗಳನ್ನು ಅಲ್ಲಮಪ್ರಭುವು ಎಲ್ಲಾ ಭಕ್ತರಿಗೆ ಸಗುಣರೂಪದಿಂದಲೇ ಮನವರಿಕೆ ಮಾಡಿಕೊಡುತ್ತಿದ್ದಾನೆ. ಅವನ ಎದುರು ಎಲ್ಲಾ ಶರಣರ ಪ್ರತಿನಿಧಿಯಾಗಿ ಬಸವಣ್ಣ ನಿಂತಿದ್ದಾನೆ! ಬಸವಣ್ಣನಿಗೆ ಹೇಳುವ ಮಾತು ಎಲ್ಲಾ ಶರಣರಿಗೂ ಅನ್ವಯಿಸುತ್ತದೆ. ಚಾಮರಸನ ಕಾವ್ಯದಲ್ಲಿ ಬರುವ ಈ ಪ್ರಸಂಗವನ್ನು ಕಥನರೂಪದಲ್ಲಿ ಮುಂದುವರಿಸೋಣ. ಭಕ್ತಿಯನ್ನು ಆಚರಿಸುವುದರಲ್ಲಿ ಪಂಡಿತರಾದವರು ಲಿಂಗವೇ ಪ್ರಾಣಸ್ವರೂಪವೆಂದು ತಿಳಿಯುತ್ತಾರಷ್ಟೆ. ಆ ಪ್ರಾಣವನ್ನು ಲಿಂಗದಲ್ಲಿ ಸೇರಿಸಿದ ಮೇಲೆ ಮುಂದೆ ಆ ಲಿಂಗವನ್ನು ತನುವಿನಿಂದ ಅಗಲಿಸಬಾರದು. ಲಿಂಗಕ್ಕೂ ಅಂಗಕ್ಕೂ ಸಂಬಂಧವಾದಂತೆ ಲಿಂಗಧಾರಣೆ ಆದು ದಾದರೆ ಆತನೇ ಮಂಗಳಾತ್ಮಕ. ಇಷ್ಟ
ಲಿಂಗಕ್ಕೆ ನೈವೇದ್ಯಮಾಡಿದ ಸಿಹಿ, ಕಹಿ, ಒಗರು, ಉಪ್ಪು, ಖಾರ ಮತ್ತು ಹುಳಿ ಈ ಆರು ರಸಗಳಿರುವ ಪದಾರ್ಥ ವನ್ನು ಲಿಂಗದ ಸ್ಮರಣೆಯಲ್ಲೇ ಅರ್ಪಿಸಬೇಕು. ಅದರಿಂದ ಉಂಟಾದ ಸಂತೃಪ್ತಿಸುಖವನ್ನು ತೃಪ್ತಿಲಿಂಗವಾದ ಪ್ರಾಣಲಿಂಗಕ್ಕೆ ಜಾಣತನದಿಂದ ಯಾರು ಅರ್ಪಿಸುವರೋ ಅವರು ಬುದ್ಧಿವಂತರೆನಿಸಿಕೊಳ್ಳುತ್ತಾರೆ. ಅಂತರಂಗವು ಪಕ್ವವಾಗುವ ಸ್ಥಿತಿಯಲ್ಲಿ ಗುರು- ಲಿಂಗ- ಜಂಗಮರು ನೀಡಿದ ಪಾದೋದಕ ಪ್ರಸಾದಗಳನ್ನು ಸ್ವೀಕರಿಸುತ್ತಿದ್ದರೆ ಸತ್ಯ ಮತ್ತು ಭಕ್ತಿಗಳಿಗೆ ಅವನು ಅಧಿಕಾರಿಯಾಗಿ ಕೈವಲ್ಯವನ್ನು ಪಡೆಯುತ್ತಾನೆ. ದೇಹವನ್ನು ಇಷ್ಟಗುರುವಿಗೆ; ಮನಸ್ಸನ್ನು ಇಷ್ಟಲಿಂಗಕ್ಕೆ; ಧನವನ್ನು ಇಷ್ಟಜಂಗಮಕ್ಕೆ ಸಲ್ಲಿಸುವವನಿಗೆ, ಬಾಹ್ಯದಲ್ಲಿ ಕಾಣಿಸುವ ಗುರು- ಲಿಂಗ-ಜಂಗಮರು ಅಂತರಂಗದಲ್ಲಿಯೂ ಕಾಣಿಸುತ್ತಾರೆಂದು ಅಲ್ಲಮ ಬಸವಣ್ಣನಿಗೆ ಮನವರಿಕೆಯಾಗುವಂತೆ ತಿಳಿಸುತ್ತಿದ್ದಾನೆ.
ಇಷ್ಟಲಿಂಗದ ನೆಲೆ ತಿಳಿದು ಜಾಣತನದಿಂದ ದೇಹಮನಸ್ಸುಗಳ ಆಸೆಯನ್ನು ತಿದ್ದಿ ಅದನ್ನು ಸ್ವಚ್ಛಗೊಳಿಸಿಕೊಂಡವನಿಗೆ ಶುದ್ಧಭಕ್ತಿ ಏನೆಂಬುದು ತಿಳಿಯುತ್ತದೆ. ವಿಚಾರಮಾಡಿ ನೋಡಿದರೆ, ಸರ್ವಸಂಗ ಪರಿತ್ಯಾಗಿಯಾಗಿ, ಅಂತ ರಂಗದ ಕೋಣೆಗೆ ಸಮರ್ಥನೆನ್ನುವ ಒಡೆಯನಾಗಿ, ಮಾಯೆಯ ನಟನೆಯನ್ನು ನಿವಾರಿಸುವ ಹೋರಾಟಕ್ಕೆ ಇಷ್ಟಲಿಂಗ ಸಂಬಂಧವು ಸಾಧನವಾಗುತ್ತದೆ. ಕೈವಲ್ಯ ಪದ ಬೇಕೆನ್ನುವ ಪರಿಶುದ್ಧನಿಗೆ ಮೊದಲು ಇಷ್ಟಲಿಂಗ ಬೇಕಾಗುತ್ತದೆ. ಪ್ರಾಣಲಿಂಗದ ನೆಲೆ ತಿಳಿಯಲು, ಸಚ್ಚಿದಾನಂದದ ಸ್ಥಿತಿಯಲ್ಲಿ ನಿಲ್ಲಲು, ಇದು ಮುಖ್ಯ. ತನ್ನನ್ನು ತಾನು ತಿಳಿಯುವ ಭಕ್ತಿಯ ವಿಶೇಷ ಜ್ಞಾನವನ್ನು ಅರಿಯದೆ ತಾನು ಬೇರೆ, ಲಿಂಗ ಬೇರೆ ಎಂಬ ಭಿನ್ನಭಾವನೆಯ ಭ್ರಮೆಯಲ್ಲಿ ಇದ್ದನಾದರೆ ಅಂಥವರು ಹುಟ್ಟು-ಸಾವುಗಳ ಬಂಧನದಲ್ಲಿ ಸಿಕ್ಕಿಬಿದ್ದು ಕಷ್ಟವನ್ನು ಅನುಭವಿಸುತ್ತಲೇ ಇರುತ್ತಾರೆ. ಹೀಗಾಗಿ, ಸದಾ ಲಿಂಗಸಂಗಿಗಳ ಜೊತೆಯಲ್ಲೇ ಇರಬೇಕು. ಅವರ ಸಹವಾಸದಲ್ಲೇ ಮಗ್ನರಾಗಿರಬೇಕು. ಇಂಥವರು ಇಷ್ಟಲಿಂಗದ ಭಕ್ತಿಸ್ವರೂಪವನ್ನು ತಿಳಿದು ಆನಂದಿಸುತ್ತಾರೆ. ಇಂಥವರು ಭಕ್ತಿಲಿಂಗದಲ್ಲೇ ತಮ್ಮನ್ನು ತಾವೇ ಐಕ್ಯೀಗೊಳಿಸಿಕೊಡುತ್ತಾರೆಂಬುದು ಅಲ್ಲಮಪ್ರಭುವಿನ ಆಶಯವಾಗಿದೆ.
(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)
(ಪ್ರತಿಕ್ರಿಯಿಸಿ: vvsudina@gmail.com, mallepuram@gmail.com)