ಕಣ್ಣೀರ ಕಟ್ಟೆ ಒಡೆಯಿತು.. ವೇದಿಕೆಯಲ್ಲೇ ಬಿಕ್ಕಿಬಿಕ್ಕಿ ಅತ್ತ ಶಿವಣ್ಣ, ರಾಘಣ್ಣ: ಬಂದ್ಬಿಡು ಕಂದಾ.. ನಾನೇ ಹೋಗುವೆ

puneeth shivanna raghanna
Published on

ಬೆಂಗಳೂರು: 'ಪುನೀತ್ ನಮನ' ಕಾರ್ಯಕ್ರಮದ ಆರಂಭದಿಂದಲೂ ಕೊನೆಯವರೆಗೂ ಅಪ್ಪು ಕುಟುಂಬಸ್ಥರು ಕಣ್ಣೀರು ಹಾಕುತ್ತಲೇ ಇದ್ದರು. ನಟ ಶಿವರಾಜ್​ಕುಮಾರ್​ ಮತ್ತು ಪುನೀತ್​ ಪತ್ನಿ ಅಶ್ವಿನಿ ಎಷ್ಟೇ ತಡೆದರೂ ನೋವಿನ ಕಟ್ಟಯೊಡೆದು ಕಣ್ಣೀರು ಸುರಿಯುತ್ತಲೇ ಇತ್ತು. ಅವಡುಗಚ್ಚಿಕೊಂಡು ಕಣ್ಣೀರನ್ನು ಎಷ್ಟೇ ತಡೆದರೂ ನಿಲ್ಲುತ್ತಿರಲಿಲ್ಲ. ಈ ದೃಶ್ಯ ನೋಡಿದವರ ಮನಕಲಕುತ್ತಲೇ ಇದೆ.

ಸಿಎಂ ಹಾದಿಯಾಗಿ ಕನ್ನಡ, ತೆಲುಗು, ತಮಿಳು ಚಿತ್ರನಟರ ಮಾತು ಮುಗಿದ ಬಳಿಕ ಕೊನೆಯಲ್ಲಿ ವೇದಿಕೆಗೆ ಬಂದ ರಾಘವೇಂದ್ರ ರಾಜ್​ಕುಮಾರ್​ ಮತ್ತು ಶಿವರಾಜ್​ಕುಮಾರ್​ ಅವರ ಕಣ್ಣೀರ ಕಟ್ಟೆಯೊಡೆದಿತ್ತು. ಇಬ್ಬರೂ ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತರು. '20 ದಿನಗಳಿಂದ ನೊಂದು, ತಡೆದುಕೊಂಡು ಬಂದ್ವಿ. ಪವರ್​ ಹೋದಮೇಲೆ ಬಲ್ಬ್​ಗಳು ಇನ್ನೇನು ಮಾಡಲು ಸಾಧ್ಯ? ನಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳೋಕೆ ಆಗುತ್ತಿಲ್ಲ. ಇದೇ ವೇದಿಕೆ ಮೇಲೆ ನನ್ನ ಆಯಸ್ಸು ನಿನಗೆ ಕೊಡುವೆ ಎಂದಿದ್ದೆ. ಆದರೆ ತನ್ನ ಆಯಸ್ಸನ್ನು ನನಗೆ ಕೊಟ್ಟು ಆತ ಹೋದ. ಹೇಗಾದರೂ ಮಾಡಿ ನನ್ನ ಕಳಿಸಿ, ಅವನನ್ನು ವಾಪಸ್ ಕರೆಸಿ' ಎನ್ನುತ್ತಲೇ ರಾಘಣ್ಣ, 'ಅಪ್ಪು ಕಂದಾ ನನಗೆ ನೀನು ಬೇಕು. ಈ ನೋವಿನ ಜತೆಯಲ್ಲೇ ನನ್ನನ್ನು ಕರೆಸಿಕೊಳ್ಳಲಿ' ಎಂದು ಕಣ್ಣೀರಿಟ್ಟರು. 'ಪುನೀತ್​ ಅವರನ್ನು ನಾವು ಹೂತಿಲ್ಲ, ಬಿತ್ತಿದ್ದೇವೆ' ಎನ್ನುತ್ತಾ ಅವರ ಸಮಾಜಮುಖಿ ಕೆಲಸವನ್ನ ಮುನ್ನೆಡೆಸೋಣ ಎಂದು ಕರೆಕೊಟ್ಟರು.

ಅಳುತ್ತಲೇ ವೇದಿಕೆಗೆ ಆಗಮಿಸಿದ ನಟ ಶಿವರಾಜ್​ಕುಮಾರ್​, 'ಮಾತಾಡೋಕೆ ತುಂಬಾ ಕಷ್ಟ ಆಗುತ್ತೆ. ರಾಘು ಏನೇನೋ ಮಾತಾಡಿ ಹೋದ. ನನ್ನ ತಮ್ಮನ ಬಗ್ಗೆ ನಾನು ಪದೇಪದೆ ಮಾತಾಡಿಯೇ ಅವನಿಗೆ ನನ್ನ ದೃಷ್ಟಿನೇ ಆಯ್ತಾ ಅನಿಸುತ್ತೆ. ಎಲ್ಲರೂ ನಿನ್ನ ತಮ್ಮನಿಗೆ ಅಷ್ಟೊಂದು ಹೊಗಳ್ತಿಯಲ್ಲ ಅಂತಾರೆ. ಆತನೇ ನನಗೆ ಸ್ಫೂರ್ತಿ. ಇಷ್ಟೊಂದು ಸಮಾಜ ಸೇವೆ ಮಾಡಿದ್ದಾನೆ. ಅಪ್ಪುಗೆ ಎಲ್ಲಿಂದ ಈ ಗುಣ ಬಂತೋ ಗೊತ್ತಿಲ್ಲ ಎಂದು ಬಿಕ್ಕಳಿಸಿ ಬಿಕ್ಕಳಿಸಿ ಅತ್ತರು. 'ಅಪ್ಪು ನಮ್ಮಲ್ಲಿದಾನೆ. ಅವನಿಗೆ ಜೀವಂತವಾಗಿ ಇರಿಸಿಕೊಳ್ಳೋಕೆ ನಾವು ಪ್ರಯತ್ನಿಸಬೇಕು. ಎಲ್ಲರಿಗೂ ಹೋಗೋ ಸಮಯ ಬರುತ್ತೆ, ಆದರೆ ಇವನಿಗೆ ಇಷ್ಟು ಬೇಗ ಬಂತಲ್ಲ ಅಂತ ದುಃಖ ಆಗುತ್ತೆ. ತಮಿಳು ನಟ ವಿಶಾಲ್ ಅವರನ್ನ​ ನೋಡಿದರೆ ಅಪ್ಪು ನೋಡಿದ ಹಾಗೆ ಆಗುತ್ತೆ' ಎಂದ ಶಿವಣ್ಣ, ಅಪ್ಪುಗೆ ತುಂಬಾ ಇಷ್ಟವಾಗುವ ಹಾಡೊಂದನ್ನು ಹೇಳುವೆ ಎಂದು 'ಮೇ ಶಾಯರ್‌ ತೋ ನಹೀ...' ಹಾಡಿನ ಮೂಲಕ ತಮ್ಮನಿಗೆ ಭಾವುಕ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net