

ಬೆಂಗಳೂರು: 'ವೆಂಕಟೇಶ್, ನಾನು ನಿಜವಾಗ್ಲೂ ಹೀರೋ ಆಗ್ತೀನಾ?' ಅಂತ ಪುನೀತ್ ರಾಜ್ಕುಮಾರ್ ಅವರು 20 ವರ್ಷದ ಹಿಂದೆ ಅಪ್ಪುವೆಂಕಟೇಶ್ ಎಂಬುವರನ್ನ ಕೇಳಿದ್ದರಂತೆ... ಆ 24 ವರ್ಷದ ಹಿಂದಿನ ಘಟನೆ ಜತೆ ಹಲವು ಕುತೂಹಲ ವಿಷಯಗಳನ್ನ ಅಪ್ಪು ವೆಂಕಟೇಶ್ ಭಾವುಕರಾಗಿಯೇ 'ದಿಗ್ವಿಜಯ ನ್ಯೂಸ್' ಜತೆ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಅಪ್ಪು ವೆಂಕಟೇಶ್ ಯಾರು ಗೊತ್ತಾ? 'ಅಪ್ಪು' ಸಿನಿಮಾ ತೆರೆ ಕಾಣುವ ಮೊದಲೇ ಅಂದರೆ 1996ರಿಂದ ಪುನೀತ್ ಅವರಿಗೆ ಜಿಮ್ನಾಸ್ಟಿಕ್ ತರಬೇತಿ ಕೊಟ್ಟವರು.
ಡಾ.ರಾಜ್ ಅವರ ಮನೆಯ ಮೆಟ್ಟಿಲು ಹತ್ತೋಕೆ ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ. ನಾನು ಮೊದಲು ತರಬೇತಿ ಕೊಡಲು ಶುರು ಮಾಡಿದ್ದೇ ಅಪ್ಪು ಅವರಿಗೆ. ಅಪ್ಪು ಅವರಿಗೆ ಆ್ಯಕ್ಷನ್ ಮೂವಿ ಅಂದ್ರೆ ಇಷ್ಟ. ಹಾಗಾಗಿಯೇ ಅಪ್ಪು ಮೂವಿಯಲ್ಲಿ ಅಭಿನಯಿಸೋಕು 7 ವರ್ಷ ಮೊದಲೇ ಫೈಟಿಂಗ್ ತರಬೇತಿ ಪಡೆದರು. ತರಬೇತಿಯ ಆರಂಭದಲ್ಲಿ 'ವೆಂಕಟೇಶ್ ನಾನು ನಿಜವಾಗ್ಲೂ ಹೀರೋ ಆಗ್ತೀನಾ?' ಅಂತ ಅಪ್ಪು ಕೇಳಿದ್ರು. ನಾನು, 'ಯಾಕ್ ಅಪ್ಪು ಅವರೇ ನೀವು ಹೀರೋ ಆಗ್ತೀರಿ. ಅಪ್ಪಾಜಿ ಅವರ ಮಗ ನೀವು' ಅಂದಿದ್ದೆ. 'ಅಪ್ಪು' ಸಿನಿಮಾ ಟೈಟಲ್ ಕೊಟ್ಟಿದ್ದೇ ಶಿವಣ್ಣ. ನಾನು ಅಪ್ಪು ಅವರಿಗೆ ತರಬೇತಿ ಕೊಡುತ್ತಿದ್ದೆ, ಆಗ ಅಪ್ಪಾಜೀ ಅವರು ನನಗೂ ಒಮ್ಮೆ ಜಿಮ್ ಬಗ್ಗೆ ಹೇಳಿಕೊಡಿ ಎಂದು ಕೇಳಿದ್ರು, ಅವರಿಗೂ ಮಾಡಿಸಿದ್ದೆ. ಅಪ್ಪಾಜಿ ಅವರಿಗೆ ಶಸ್ತ್ರಚಿಕಿತ್ಸೆ ಆಗಿತ್ತು. ಹಾಗಾಗಿ ಅವರು ಆ ಸಮಯದಲ್ಲಿ ಕಾಲನ್ನು ಮಡಚಲು ಆಗುತ್ತಿರಲಿಲ್ಲ. ತಿಂದದ್ದು ಜೀರ್ಣ ಆಗಬೇಕಿಲ್ಲವೇ ಏನಾದರೂ ಹೇಳಿಕೊಡಿ ಅಂತ ಅಪ್ಪಾಜೀ ಹೇಳಿದ್ರು ಎಂದು ವೆಂಕಟೇಶ್ ವಿವರಿಸಿದರು.
ಅಪ್ಪುಗೆ ಅಸಾಧ್ಯ ಎಂಬುದು ಇಲ್ಲ. ವಾಲ್ ಸಮ್ಮರ್ ಆ್ಯಕ್ಷನ್ ಮಾಡಿದ್ರು, 'ರೋಪ್' ಅನ್ನೋದು ಅವರಿಗೆ ಇಷ್ಟ ಆಗ್ತಿರಲಿಲ್ಲ. 'ಆಕಾಶ್' ಮೂವಿ ಶೂಟಿಂಗ್ನಲ್ಲಿ ಚಲಿಸುತ್ತಿದ್ದ ಕಾರಿನ ಗಾಜನ್ನ ಓಡಿಹೋಗಿ ಕಾಲಿನಲ್ಲಿ ಅಪ್ಪು ಹೊಡೆದಿದ್ದರು. ಆ ಸ್ಟಂಟ್ ಓಕೆ ಆಯ್ತು. ಅಂದು ಕಾಲಿಗೆ ಪೆಟ್ಟಾಗಿ ಸ್ಟಿಚ್ ಹಾಕಿಸಿಕೊಂಡಿದ್ದರು. ನಮಗೆಲ್ಲ ಭಯ ಆಗ್ತಿತ್ತು ಅಮ್ಮವ್ರು ಬೈದ್ರೆ ಎಂದು. ಆದ್ರೆ ಅಪ್ಪು ಏನೂ ಆಗಿಲ್ಲ ಬನ್ನಿ ಅಂದ್ರು. ಅಪ್ಪು ಅವರ ಪ್ರತಿ ಸಿನಿಮಾದಲ್ಲೂ ಫೈಟಿಂಗ್ನಲ್ಲಿ ಹೊಸ ಹೊಸ ಸ್ಟಂಟ್ಸ್ ಇರೋದು. ಮಾಡಬೇಕು ಅಂದ್ರೆ ಮಾಡಬೇಕು ಅನ್ನೋ ಮನಸ್ಥಿತಿ ಪುನೀತ್ ಅವರದ್ದು. ನನಗೆ ಸುಸ್ತಾಯ್ತು, ಸಾಕು ಇವತ್ತಿಗೆ ಎಂದು ಒಮ್ಮೆಯೂ ಹೇಳಿಲ್ಲ. ನಾನು 'ಸಾಕು ಅಪ್ಪು, ರೆಸ್ಟ್ ಮಾಡಿ' ಅಂದ್ರೂ ಅವರು, 'ಮಾಡೋಣ ಈಗಲೇ' ಅಂತಿದ್ದರು... ಎಂದು ವೆಂಕಟೇಶ್ ನೆನಪಿಸಿಕೊಂಡರು.
ನನ್ನ ಹೆಸರು ವೆಂಕಟೇಶ್. ಅಪ್ಪು ಅವರಿಗೆ ನಾನು ಟ್ರೈನಿಂಗ್ ಕೊಡೋಕೆ ಶುರು ಮಾಡಿದ ಬಳಿಕ ಹಾಗೂ ಅಪ್ಪು ಸಿನಿಮಾನದಲ್ಲಿ ನಾನು ಸಹ ನಟನಾಗಿ ಅಭಿನಯಿಸಿದ ಬಳಿಕ ಅಪ್ಪು ವೆಂಕಟೇಶ್ ಎಂದೇ ಗುರುತಿಸಿಕೊಂಡೆ. ಮೊದಲು ಯುವರಾಜ ಬಂತು. ಅದರಲ್ಲಿ ನಾನೂ ಕೂಡ ಫ್ರೆಂಡ್ಸ್ ಪಾತ್ರ ನಿರ್ವಹಿಸಿದ್ದೆ ಎನ್ನುತ್ತಲೇ, ಅಪ್ಪು ಅವರು ಓವರ್ ಜಿಮ್ ಮಾಡಿದ್ದಕ್ಕೆ ಸಾವಾಯ್ತು ಎಂಬ ಅಪಪ್ರಚಾರವನ್ನ ಕೆಲವರು ಮಾಡ್ತಿದ್ದಾರೆ. ಅಪ್ಪು ಸಿನಿಮಾಗೂ ಮೊದಲು ಮಾಡ್ತಿದ್ದ ವರ್ಕೌಟ್ಗೆ ಹೋಲಿಸಿದಲ್ಲಿ ಇತ್ತೀಚಿಗೆ ತೀರ ಕಡಿಮೆ ಆಗಿತ್ತು. ಅಪ್ಪು ಎಕ್ಸಸೈಸ್ ಮಾಡ್ತಿದ್ದರು. ಅಪಪ್ರಚಾರ ಮಾಡಬೇಡಿ. ಅವರು ದೇವರ ಬಳಿ ಇದ್ದಾರೆ. ಇಂಥ ವಿಷ್ಯ ಅವರ ಮನಸ್ಸಿಗೆ ನಿಜಕ್ಕೂ ಬೇಸರ ತರುತ್ತೆ. ಓವರ್ ಟ್ರೈನಿಂಗ್ ಬೇಡ, ಆದರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ತರಬೇತಿ ಇರಲಿ ಎಂದು ಮನವಿ ಮಾಡಿದರು.