

ಹಾಸನ: ನಟ ಪುನೀತ್ ರಾಜ್ಕುಮಾರ್ ನಿಧನರಾಗಿ 11 ದಿನ ಆದರೂ ಅವರು ಇನ್ನಿಲ್ಲ ಎಂಬ ನೋವು ಮಾತ್ರ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಕಿಂಚಿತ್ತೂ ಕಡಿಮೆ ಆಗಿಲ್ಲ. ಅಪ್ಪು ಅವರ ಸಮಾಧಿ ಬಳಿ ಪ್ರತಿನಿತ್ಯ ಅಸಂಖ್ಯಾತ ಜನರು ಬಂದು ನಮಿಸುತ್ತಾ ಕಂಬನಿ ಮಿಡಿಯುತ್ತಲೇ ಇದ್ದಾರೆ. ರಾಜ್ಯಾದ್ಯಂತ ಪ್ರತಿ ಊರು, ಏರಿಯಾದಲ್ಲೂ ಪುನೀತ್ ಭಾವಚಿತ್ರ ಇಟ್ಟು ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ದೀಪ ಬೆಳಗಿ ಭಾವುಕರಾಗುತ್ತಿದ್ದಾರೆ. 'ಮತ್ತೆ ಹುಟ್ಟಿ ಬನ್ನಿ ಅಪ್ಪು', 'ಲವ್ ಯೂ ಅಪ್ಪು', 'ಮಿಸ್ ಯೂ ಅಪ್ಪು', 'ಪುನೀತ್ ಅಗಲಿಕೆ ನೋವು ಕಾಡುತ್ತಲೇ ಇದೆ', 'ದೇವರೇ, ನೀನೆಷ್ಟು ಕ್ರೂರಿ?'... ಎಂಬಿತ್ಯಾದಿ ಹೃದಯಸ್ಪರ್ಶಿ ಬರಹದೊಂದಿಗೆ ಪುನೀತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇದ್ದಾರೆ. ಅಪ್ಪು ಅಭಿನಯದ ಸಿನಿಮಾದ ವಿಡಿಯೋ ತುಣುಕುಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಾ ಭಾವುಕರಾಗುತ್ತಲೇ ಇದ್ದಾರೆ.
ಇಂತಹ ನೋವಿನ ಸಂದರ್ಭದಲ್ಲಿ ಅಪ್ಪು ಅಭಿಮಾನಿಯೊಬ್ಬರು ಹಾಸನಾಂಬೆ ದೇವಿಗೆ ಪತ್ರ ಬರೆದಿದ್ದು, ಪುನೀತ್ ರಾಜ್ಕುಮಾರ್ ಸಾವು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ. ಆ ಪತ್ರದ ಸಾಲುಗಳನ್ನು ಓದುತ್ತಿದ್ದರೆ ಕಣ್ತುಂಬಿ ಬರುತ್ತದೆ. ಅದರ ವಿವರ ಇಲ್ಲಿದೆ.
''ಶ್ರೀ ಹಾಸನಾಂಬೆ ತಾಯಿ ಚರಣಗಳಿಗೆ ನನ್ನ ಕೋಟಿ ಕೋಟಿ ವಂದನೆಗಳು. ಅಮ್ಮ, ಆ ಧರ್ಮಾತ್ಮ ಪುನೀತ್ ರಾಜ್ಕುಮಾರ್ ಅವರ ಪ್ರಾಣ ತೆಗೆದುಕೊಳ್ಳುವ ಬದಲು ರಾಜಕೀಯದಲ್ಲಿ ನಾಟಕವಾಡುತ್ತಾ ಅವರೂ ತಿಂದು, ಅವರ ಮರಿಮೊಮ್ಮಕ್ಕಳೂ ತಿಂದು ತೇಗಿದರೂ ಕರಗದಷ್ಟು ಆಸ್ತಿ ಮಾಡಿ ಸಭೆಗಳಲ್ಲಿ ನಾಟಕವಾಡುತ್ತಾರಲ್ಲ ಅಂಥಾ ಬೇ** ರಾಜಕಾರಣಿಗಳನ್ನು ಸಾಯಿಸಬೇಕಿತ್ತು. ಆಗ ನಮ್ಮ ಕರ್ನಾಟಕ ರಾಜ್ಯ ಮುಂದುವರಿಯುವ ಜತೆಗೆ ಬಡವರು ಕರ್ನಾಟಕದಲ್ಲಿ ಸುಖವಾಗಿರುತ್ತಿದ್ದರು. ನಿನ್ನೆ, ಮೊನ್ನೆ ಬಂದ ಕೆಲ ರಾಜಕಾರಣಿಗಳು ಕೋಟಿ ಕೋಟಿ ಆಸ್ತಿ ಮಾಡಿಕೊಂಡು ಬೀಗುತ್ತಿದ್ದಾರೆ. ಅಂತಹವರಿಗೆ ಕರ್ಮದ ಸಾವು ಬೇಗ ಬರಲಿ. ಪಾಪ ಪುನೀತ್ ರಾಜ್ಕುಮಾರ್ ಅವರು ಬದುಕಬೇಕಿತ್ತು. ಅವರು ಬದುಕಿದ್ದಿದ್ದರೆ ನಾಲ್ಕಾರು ಜನರಿಗೆ ನೆಮ್ಮದಿಯ ಬದುಕು ಸಿಗುತ್ತಿತ್ತು... ನಮಸ್ಕಾರ ತಾಯಿ''. ಎಂದು ಭಕ್ತರೊಬ್ಬರು ಹಾಸನಾಂಬೆಗೆ ಪತ್ರ ಬರೆದಿದ್ದಾರೆ. ಆ ಮೂಲಕ ಅಪ್ಪು ಸಾವು ನ್ಯಾಯವೇ? ಅನ್ಯಾಯ ಮಾಡುತ್ತಾ ಜನರ ಸುಲಿಗೆ ಮಾಡುತ್ತಿರುವರನ್ನ ಬದುಕಲು ಏಕೆ ಬಿಟ್ಟಿರುವೆ? ನ್ಯಾಯದ ಮಾರ್ಗದಲ್ಲಿ ಸಾಗುತ್ತಾ... ಬಡವರು ಮತ್ತು ನೊಂದರ ಬದುಕಿಗೆ ಬೆಳಕಾಗಿದ್ದ ಪುನೀತ್ರ ಉಸಿರನ್ನ ಚಿಕ್ಕ ವಯಸ್ಸಿಗೇ ಏಕೆ ನಿಲ್ಲಿಸಿಬಿಟ್ಟೆ ದೇವರೇ? ಇದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.