PSI ಪರೀಕ್ಷೆ ಅಕ್ರಮ: ಗೃಹ ಸಚಿವರ ಕಾರ್ಯಕ್ರಮ ಮುಗಿದ ಕೆಲ ಗಂಟೆಯಲ್ಲೇ ಸಿಐಡಿ ಖೆಡ್ಡಾಕ್ಕೆ ಬಿದ್ದ ಡಿವೈಎಸ್​ಪಿ ವೈಜನಾಥ

PSI
Published on

ಕಲಬುರಗಿ: ಪಿಎಸ್​ಐ ಹುದ್ದೆಗಳ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣ ಪೊಲೀಸ್​ ಇಲಾಖೆ ಸುತ್ತಲೇ ಗಿರಕಿ ಹೊಡೆಯುತ್ತಿದ್ದು, ಶುಕ್ರವಾರ ರಾತ್ರಿ ಕರ್ನಾಟಕ ಮೀಸಲು ಪೊಲೀಸ್​ ಪಡೆ ಸಹಾಯಕ ಕಮಾಂಡೆಂಟ್​ (ಡಿವೈಎಸ್ಪಿ) ವೈಜನಾಥ ರೇವೂರ ಎಂಬುವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೃಹ ಸಚಿವರ ಕಾರ್ಯಕ್ರಮ ಮುಗಿದ ಕೆಲ ಗಂಟೆಗಳಲ್ಲೇ ಈ ಅಧಿಕಾರಿ ಖೆಡ್ಡಾಕ್ಕೆ ಬಿದ್ದಿದ್ದಾರೆ.

ಕಲಬುರಗಿ ಹೊರವಲಯದ ತಾಜಸುಲ್ತಾನಪುರದಲ್ಲಿರುವ ಕೆಎಸ್​ಆರ್​ಪಿ 6ನೇ ಪಡೆಯಲ್ಲಿ ವೈಜನಾಥ ಡಿವೈಎಸ್​ಪಿ ಆಗಿದ್ದಾರೆ. ಶುಕ್ರವಾರ ಬೆಳಗ್ಗೆ ನಡೆದ ಕೆಎಸ್​ಆರ್​ಪಿ ಪೇದೆಗಳ 4ನೇ ತಂಡದ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ವೈಜನಾಥ ಕೂಡ ಭಾಗವಹಿಸಿದ್ದರು. ಗೃಹ ಸಚಿವರ ಕಾರ್ಯಕ್ರಮ ಮುಗಿದ ಬಳಿಕ ಸಿಐಡಿ ತಂಡ ವೈಜನಾಥರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ವೈಜನಾಥ ಕೆಲ ವರ್ಷಗಳಿಂದ ಅಕ್ರಮ ನೇಮಕಾತಿ ಮಾಡಿಸುತ್ತಿದ್ದರು ಎಂಬ ಗುಮಾನಿ ಸಿಐಡಿಗೆ ಕಾಡುತ್ತಿತ್ತು. ಅಕ್ರಮ ದಂಧೆ ಕಿಂಗ್​ಪಿನ್​ಗಳ ಜತೆಗೂಡಿ ಕೆಲಸ ಕೊಡಿಸುತ್ತಿದ್ದ ಎಂಬ ಸುಳಿವು ಆಧರಿಸಿ ಅವರನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಕಚೇರಿಗೆ ತಂದು ತಡರಾತ್ರಿವರೆಗೆ ತೀವ್ರ ವಿಚಾರಣೆ ನಡೆಸಿದರು. ಪ್ರಕರಣದಲ್ಲಿ ಅವರ ಪಾತ್ರ ಕಂಡು ಬಂದಲ್ಲಿ ಬಂಧಿಸುವ ಸಾಧ್ಯತೆಯೂ ಇದೆ.

ವೈಜನಾಥ ಮೂಲತಃ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದವರು. 2012ರಲ್ಲಿ ಆರ್​ಎಸ್​ಐ ನೇಮಕಗೊಂಡಿದ್ದ ಅವರು, ಡಿವೈಎಸ್ಪಿಯಾಗಿ ಬಡ್ತಿ ಹೊಂದಿದ್ದರು. ಅಲ್ಲದೆ ಸಹಾಯಕ ಕಮಾಂಡೆಂಟ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದರೊಂದಿಗೆ ಕೆಎಸ್​ಆರ್​ಪಿಗೂ ಅಕ್ರಮದ ನಂಟು ವ್ಯಾಪಿಸಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net