

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಧ್ಯವರ್ತಿಗಳ ಪೈಕಿ ಇಬ್ಬರು ಕೋರ್ಟ್ಗೆ ಶರಣಾಗಿದ್ದಾರೆ. ಆರೋಪಿಗಳಾದ ಸಿದ್ದರಾಜು, ಬೋರೇಗೌಡನನ್ನು ಬಂಧಿಸಲಾಗಿದೆ.
ಪಿಎಸ್ಐ ಹಗರಣದ ಪ್ರಮುಖ ಆರೋಪಿಗಳಾದ ಸಿದ್ದರಾಜು, ಬೋರೇಗೌಡ, ಬ್ಯಾಡರಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ನವೀನ್ ಸೇರಿದಂತೆ ಅನೇಕರ ಬಗ್ಗೆ ಐದಾರು ತಿಂಗಳು ಕಳೆದರೂ ಸುಳಿವೇ ಸಿಕ್ಕಿರಲಿಲ್ಲ. ಹಾಗಾಗಿ ಕೋರ್ಟ್ನ ಸೂಚನೆಯಂತೆ ಆರೋಪಿಗಳ ಪತ್ತೆಗೆ ಸಿಐಡಿ ಅಧಿಕಾರಿಗಳು ತಮಟೆಯ ಮೊರೆ ಹೋಗಿದ್ದರು. ಇತ್ತೀಚಿಗೆ ಸಿದ್ದರಾಜುವಿನ ಲಗ್ಗೆರೆ ನಿವಾಸದ ಬಳಿ ತಮಟೆ ಬಾರಿಸಿ... ನೋಟಿಸ್ ಅಂಟಿಸಿದ್ದ ಸಿಐಡಿ ಅಧಿಕಾರಿಗಳು ಆರೋಪಿಯ ಕುರಿತು ಮಾಹಿತಿ ನೀಡುವಂತೆ ಪ್ರಚಾರ ಮಾಡಿದ್ದರು.
ಸಿದ್ದರಾಜಿವಿನ ಲಗ್ಗೆರೆ ನಿವಾಸದಲ್ಲಿ ಟಿವಿ, ಫ್ರಿಡ್ಜ್, ಸೋಫಾ, ಕಾರು ಹಾಗೂ ಬೈಕ್ ಸೇರಿ ಚರಾಸ್ತಿ ಜಪ್ತಿಗೂ ಮುಂದಾಗಿದ್ದರು. ಇದರ ಬೆನ್ನಲ್ಲೇ ಅಂದರೆ ನಿನ್ನೆ(ಸೆ.16) ಸಿದ್ದರಾಜು ಕೋರ್ಟ್ಗೆ ನೇರವಾಗಿ ಬಂದು ಶರಣಾಗಿದ್ದಾನೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಸಿದ್ದರಾಜು, ಪಿಎಸ್ಐ ಆಗಿ ಆಯ್ಕೆಯಾಗಿದ್ದ ಗಜೇಂದ್ರ, ಮನೋಜ್ಗೆ ಮಧ್ಯವರ್ತಿಯಾಗಿದ್ದ ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ.
ಅತ್ತ ಮತ್ತೊಬ್ಬ ಆರೋಪಿ ಬೋರೇಗೌಡ ಎಂಬಾತನೂ ನಿನ್ನೆ ಕೋರ್ಟ್ಗೆ ಶರಣಾಗಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈತ ತೀರ್ಥಯಾತ್ರೆಗೆ ಹೋಗಿ ತಲೆಮರೆಸಿಕೊಂಡಿದ್ದ.