ನೂಪುರ್​ ವಿರುದ್ಧ ಪ್ರತಿಭಟನೆ: ಹೋರಾಟದ ಹೆಸರಲ್ಲಿ ಹಿಂಸಾಚಾರ ಮಾಡೋದು ಎಷ್ಟು ಸರಿ?

racnh i
Published on

ರಾಂಚಿ: ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆ. ಆದರೆ ಪ್ರತಿಭಟನೆ ಹೆಸರಲ್ಲಿ ಗಲಭೆ ಎಬ್ಬಿಸೋದು ಎಷ್ಟು ಸರಿ? ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಬಿಜೆಪಿ ನಾಯಕಿ ನೂಪುರ್​ ಶರ್ಮಾ ಹೇಳಿಕೆ ತಪ್ಪು, ಹಾಗಂತ ಹಿಂಸಾತ್ಮಾಕ ಹೋರಾಟ ಬೇಕೆ? ಎಂದು ಪ್ರಶ್ನಿಸಿದ್ದಾರೆ.

ಪ್ರವಾದಿ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ನೂಪುರ್​ ಶರ್ಮಾ ಬಂಧನಕ್ಕೆ ಒತ್ತಾಯಿಸಿ ಶುಕ್ರವಾರ ದೆಹಲಿಯ ಜುಮ್ಮಾ ಮಸೀದಿ, ಉತ್ತರಪ್ರದೇಶದ ಪ್ರಯಾಗರಾಜ್​, ಲಖನೌ, ಸಹರನ್​ಪುರ, ಮೊರಾದಾಬಾದ್​, ಜಾರ್ಖಂಡ್​, ರಾಂಚಿ, ಹೈದರಾಬಾದ್​, ಮುಂಬೈ, ಸೊಲ್ಲಾಪುರ, ಹಾಗೂ ಪಶ್ಚಿಮಬಂಗಾಳದಲ್ಲಿ ನಡೆದ ದೊಡ್ಡಮಟ್ಟದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಜಾರ್ಖಂಡ್​ನ ರಾಂಚಿಯಲ್ಲಿ ಪ್ರತಿಭಟನೆ ಹಿಂಸಾತ್ಮಕ್ಕೆ ತಿರುಗಿ ಈ ಗಲಭೆಯಲ್ಲಿ ಇಬ್ಬರು ಮೃತಪಟ್ಟಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ಬಳಿಕ, ಬೀದಿಗಿಳಿದ ಜನರು ಪ್ರಯಾಗರಾಜ್​ನಲ್ಲಿ ಕಲ್ಲುತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಕೋಲ್ಕತ್ತ ಸೇರಿದಂತೆ ಹಲವೆಡೆ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿಪ್ರಹಾರ ನಡೆದಿತ್ತು. ಈ ಗಲಭೆಯಲ್ಲಿ ಪೊಲೀಸರೂ ಗಾಯಗೊಂಡಿದ್ದಾರೆ.

ಶುಕ್ರವಾರ ಉತ್ತರ ಭಾರತದಲ್ಲಿ ಪ್ರತಿಭಟನೆಯ ಕಿಚ್ಚು ಆತಂಕ ಸೃಷ್ಟಿಸಿತ್ತು. ಈ ಹಿಂಸಾತ್ಮಾಕ ಪ್ರತಿಭಟನೆ ಹಿಂದೆ ಸಂಘಟನೆಗಳ ಕೈವಾಡ ಇದೆಯಾ? ಪ್ರತಿಭಟನಾ ನಿರತರರಿಗೆ ಮೊದಲೇ ಪ್ರಚೋದನೆ ನೀಡಲಾಗಿತ್ತಾ? ಎಂಬ ಶಂಕೆಯೂ ವ್ಯಕ್ತವಾಗಿದೆ. ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net