

ಇತ್ತೀಚಿಗೆ ನಟನೆಗೂ ಕಾಲಿಟ್ಟಿರುವ ಚಂದನ್ ಶೆಟ್ಟಿ, ಎಲ್ಲರ ಕಾಲೆಳೆಯುತ್ತೆ ಕಾಲ, ಸೂತ್ರಧಾರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದು ರಿಲೀಸ್‌ಗೆ ರೆಡಿಯಾಗಿವೆ. ಚಂದನ್ ಶೆಟ್ಟಿ ತಮ್ಮ ಅದ್ಭುತ ಹಾಡುಗಳ ಮೂಲಕ ಸಿನಿ ಪ್ರೇಕ್ಷಕರಿಗೆ ಹತ್ತಿರವಾದ ಗಾಯಕ.
ಸದ್ಯ ನಾಯಕ ನಟನಾಗಿ ನಟಿಸಿರುವ ಒಂದೆರಡು ಸಿನಿಮಾಗಳು ಅಂತಿಮ ಘಟ್ಟದಲ್ಲಿರುವಾಗಲೇ ಚಂದನ್ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ.
ಯುವ ನಿರ್ದೇಶಕ ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರದ ಟೈಟಲ್ ಇದೇ 25ರಂದು ಅಂದರೆ, ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಅನಾವರಣಗೊಳ್ಳಲಿದೆ.
ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನೀಡಲು ಒಂದು ಪ್ರಮೋಷನಲ್ ವಿಡಿಯೋ ಮಾಡಲಾಗಿದೆ. ಅದರಲ್ಲಿ ಟೈಟಲ್ ಲಾಂಚ್ ಬಗ್ಗೆಯೇ ಚರ್ಚೆ ನಡೆದಿದೆ. ಯಾರಿಂದ ಶೀರ್ಷಿಕೆ ಬಿಡುಗಡೆ ಮಾಡಿಸೋದು ಎಂಬ ಬಗ್ಗೆ ನಿರ್ದೇಶನ ತಂಡದವರು ಮತ್ತು ಚಂದನ್ ಶೆಟ್ಟಿ ತಲೆ ಕೆಡಿಸಿಕೊಳ್ಳುತ್ತಾರೆ. ಅಂದು ರಾತ್ರಿ ನಿರ್ದೇಶಕರ ಕನಸಿನಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ಬರುತ್ತಾಳೆ. ‘ನಿಮ್ಮ ಸಿನಿಮಾದ ಟೈಟಲ್ ಅನ್ನು ವರಮಹಾಲಕ್ಷ್ಮಿ ಹಬ್ಬದ ದಿನ ನಾನೇ ಲಾಂಚ್ ಮಾಡ್ತೀನಿ’ ಎಂದು ಆಕೆ ಭರವಸೆ ನೀಡುತ್ತಾಳೆ. ಈ ರೀತಿ ತಮಾಷೆಯ ಪ್ರಸಂಗ ಈ ಪ್ರೋಮೋ ವಿಡಿಯೋದಲ್ಲಿದೆ.
ಪ್ರತಿಭಾನ್ವಿತ ಯುವ ತಂಡ, ಒಂದೊಳ್ಳೆ ಕಥೆಯ ಮೂಲಕ ಚಂದನ್ ಜೊತೆಗೆ ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗಿದೆ. ಒಟ್ಟಾರೆ ಸಿನಿಮಾ ಹೇಗಿರಬಹುದೆಂಬ ಸಣ್ಣ ಸೂಚನೆ ಟೈಟಲ್ ಜೊತೆಗೆ ಅನಾವರಣಗೊಳ್ಳುವ ನಿರೀಕ್ಷೆಗಳಿವೆ. ಇಂದು ಚಿತ್ರತಂಡ ಟೈಟಲ್ ಪ್ರೋಮೋ ಒಂದನ್ನು ಬಿಡುಗಡೆಗೊಳಿಸಿದೆ. ಅದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗಳೂ ಸಿಕ್ಕಿವೆ. ವಿಡಿಯೋ ಚಿತ್ರದ ಟೈಟಲ್ ಕುರಿತು ಕುತೂಹಲ ಮೂಡಿಸಿದೆ.
ಈ ಚಿತ್ರದಲ್ಲಿ ಚಂದನ್ ಶೆಟ್ಟಿ ಜೊತೆಗೆ ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ ಮುಂತಾದವರು ನಟಿಸಲಿದ್ದಾರೆ ಎಂದು ಹೇಳಲಾಗಿದೆ.
ತಾಂತ್ರಿಕ ವರ್ಗವೂ ಸೇರಿದಂತೆ, ಬಹುಮುಖ್ಯವಾದ ಇನ್ನೊಂದಷ್ಟು ವಿಚಾರಗಳನ್ನು ಹಂತ ಹಂತವಾಗಿ ಪ್ರೇಕ್ಷಕರ ಮುಂದಿಡಲು ಚಿತ್ರತಂಡ ತೀರ್ಮಾನಿಸಿದೆ.