ವಿವೇಕ್​ ಸಾವು ಪ್ರಕರಣ: ಕೇಸ್​ ದಾಖಲಿಸ್ತೀವಿ ಅಂದವರು ಆ ಒಂದು ಫೋನ್​ ಕಾಲ್​ಗೆ ಸುಮ್ಮನಾದ್ರು!

love u rachhu -vivek
Published on

ಬೆಂಗಳೂರು: ‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ಹೈಟೆನ್ಷನ್​ ವಿದ್ಯುತ್​ ತಂತಿ ತಗುಲಿ ಫೈಟ್​ ಅಸಿಸ್ಟೆಂಟರ್​ ವಿವೇಕ್​(35) ಮೃತಪಟ್ಟಿದ್ದಾನೆ. ಈ ಸಂಬಂಧ ಮೃತನ ಕುಟುಂಬಸ್ಥರು ಇದುವರೆಗೂ ದೂರು ಕೊಟ್ಟಿಲ್ಲ. ಆದರೆ ಪೊಲೀಸರು ಸುಮೊಟೋ ಕೇಸ್​ ದಾಖಲಿಸಿದ್ದು, ಪ್ರಕರಣ ಸಂಬಂಧ ಸಿನಿಮಾ ನಿರ್ದೇಶಕ, ಫೈಟ್ ಮಾಸ್ಟರ್ ಮತ್ತು ಕ್ರೇನ್ ಆಪರೇಟರ್ ಸೇರಿ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅತ್ತ ಈ ಪ್ರಕರಣದ A2 ಆರೋಪಿ, ನಿರ್ಮಾಪಕ ಗುರುದೇಶಪಾಂಡೆ ತಲೆ ಮರೆಸಿಕೊಂಡಿದ್ದಾರೆ. ಘಟನೆ ನಡೆದ ದಿನ ಪೊಲೀಸ್​ಗೆ ದೂರು ಕೊಡ್ತೀವಿ ಎಂದು ಮೃತನ ಕುಟುಂಬಸ್ಥರು ಹೇಳಿದ್ದರು. ಆದರೆ ಇದುವರೆಗೂ ಕೊಟ್ಟಿಲ್ಲ.

ವಿವೇಕ್​ರ ಮರಣೋತ್ತರ ಪರೀಕ್ಷೆ ನಡೆದಿದ್ದು, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇಂದು(ಮಂಗಳವಾರ) ಸಂಜೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಈ ನಡುವೆ ತಲೆ ಮರೆಸಿಕೊಂಡಿರುವ ನಿರ್ಮಾಪಕ ಗುರುದೇಶಪಾಂಡೆ, ವಿವೇಕ್​ರ ಚಿಕ್ಕಪ್ಪನಿಗೆ ಕರೆ ಮಾಡಿ ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಕೊಡ್ತೀವಿ ಎಂದಿದ್ದಾರೆ.

ಕಾನ್ಫರೆನ್ಸ್ ಕಾಲ್ ಹಾಕಿ ವಿವೇಕ್​ರ ಇಬ್ಬರೂ ಚಿಕ್ಕಪ್ಪಂದಿರೊಂದಿಗೆ ಮಾತನಾಡಿದ ಗುರುದೇಶಪಾಂಡೆ, 10 ಲಕ್ಷ ರೂಪಾಯಿ ನೆರವು ಕೊಡುವುದಾಗಿ ಹೇಳಿದ್ದಾರೆ ಎಂದು ಮೃತನ ಚಿಕ್ಕಪ್ಪ ತಿಳಿಸಿದ್ದಾರೆ.

ಈ ಘಟನೆಗೆ ಕ್ರೇನ್ ಆಪರೇಟರ್​ದ್ದೇ ತಪ್ಪು. ಗುರುದೇಶಪಾಂಡೆ ಅವರು 10 ಲಕ್ಷ ರೂ. ಪರಿಹಾರ ಕೊಡ್ತೀನಿ ಅಂದಿದ್ದಾರೆ‌ ಎಂದು ವಿವೇಕ್​ರ​ ಚಿಕ್ಕಮ್ಮ ರಾಜಮಾಣಿಕಂ ಹೇಳಿದ್ದಾರೆ.

'ಲವ್ ಯು ರಚ್ಚು' ಸಿನಿಮಾ ಶೂಟಿಂಗ್​ ವೇಳೆ ನಡೆದ ದುರಂತ ಕುರಿತು ಪ್ರತಿಕ್ರಿಯಿಸಿದ ರಾಮನಗರ ಎಸ್ಪಿ ಎಸ್.ಗಿರೀಶ್, ನಿರ್ಮಾಪಕ ಸ್ಥಳದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಜಮೀನು ಮಾಲೀಕ ರೈತ, ಆತನಿಗೆ ಏನು ವಿಷಯ ಗೊತ್ತಿರಲ್ಲಿಲ್ಲ. ಆದರೆ, ಚಿತ್ತೀಕರಣಕ್ಕೆ ಅನುಮತಿ ಪಡೆಯಬೇಕಿತ್ತು. ನಿರ್ದೇಶಕ ಕೂಡ ಅನುಮತಿ ಪಡೆಯಬೇಕಿತ್ತು, ಪಡೆದಿಲ್ಲ. ನಿನ್ನೆ ತಡರಾತ್ರಿವರೆಗೆ ಮೃತರ ಪೋಷಕರು ದೂರು ಕೊಡಲು ಮುಂದಾಗಲಿಲ್ಲ. ಕಾಂಪ್ರಮೈಸ್ ಆಗುವ ಸೂಚನೆಯಿತ್ತು, ಹಾಗಾಗಿ ಸುಮೊಟೋ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net