

ಆನಂದಪುರ: ಪಟ್ಟಣದಲ್ಲಿ ಜನರು ಶ್ರದ್ಧಾಭಕ್ತಿಯಿಂದ ಬಲಿಪಾಡ್ಯಮಿ ಹಬ್ಬ ಆಚರಿಸಿ ಗೋಪೂಜೆ ನೆರವೇರಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಮನೆಗಳನ್ನು ಸಿಂಗರಿಸಿದ್ದರು. ಹಬ್ಬಕ್ಕಾಗಿ ವಿವಿಧ ಖಾದ್ಯಗಳನ್ನು ತಯಾರಿಸಿದ್ದರು.
ರೈತರು ದನದ ಕೊಟ್ಟಿಗೆಯನ್ನು ಹಬ್ಬದ ಮುನ್ನ ದಿನ ಸ್ವಚ್ಛಗೊಳಿಸಿ ಕಬ್ಬು, ಬಾಳೆ ಕಂದು, ಮಾವಿನ ಎಲೆ ತೋರಣಗಳಿಂದ ಅಲಂಕರಿಸಿದ್ದರು. ಗೋವು ಮತ್ತು ಎತ್ತುಗಳಿಗೆ ಸ್ನಾನ ಮಾಡಿಸಿದರು. ಮೈಗೆ ಕೆಮ್ಮಣ್ಣು ಮತ್ತು ರಂಗೋಲಿ ಪುಡಿ ಬಣ್ಣ ಬರೆದು, ಚೆಂಡುಹೂ ಮತ್ತು ಕಡುಬಿನ ಹಾರದಿಂದ ಅಲಂಕರಿಸಿದ್ದರು.
ಗೋವಿನ ಕೊರಳಿಗೆ ಗೆಜ್ಜೆ, ಗಂಟೆ, ಕೊಂಬಿಗೆ ಝರಿ ಗೊಂಡೆ ಮತ್ತಿತರ ಪರಿಕರ ತೊಡಿಸಿ ಅಲಂಕಾರ ಮಾಡಿದ್ದರು. ಮನೆಮಂದಿ ಗೋವಿನ ಪಾದ ತೊಳೆದು, ಹೂವು ಮತ್ತು ಮಂತ್ರಾಕ್ಷತೆ ಹಾಕಿ, ಆರತಿ ಬೆಳಗಿದರು. ನೈವೇದ್ಯ ನೀಡಿದ ನಂತರ ಕೆಲ ಕುಟುಂಬದವರು ಗೋವುಗಳನ್ನು ಕೊಟ್ಟಿಗೆಯಿಂದ ಹೊರಕಳುಹಿಸಿ ಜಾಗಟೆ ಬಾರಿಸಿ ಓಡಿಸುವ ಮಂಗಳಕಾರ್ಯ ನಡೆಸಿದರು.
ಗ್ರಾಮೀಣ ಜನರು ಎತ್ತುಗಳನ್ನು ಅಲಂಕರಿಸಿ ಪೂಜಿಸಿ ನಂತರ ಗ್ರಾಮದ ಪ್ರಮುಖ ರಸ್ತೆ ಮೂಲಕ ಮೆರವಣಿಗೆಯಲ್ಲಿ ಸಾಗಿ ದೇಗುಲಕ್ಕೆ ಹೋಗಿ ಪ್ರದಕ್ಷಿಣೆ ಹಾಕಿದರು. ದೇವರ ಪ್ರಸಾದ ಪಡೆದು ಎತ್ತುಗಳ ತಲೆಗೆ ಹಾಕಿ ಒಳಿತಿಗಾಗಿ ಪ್ರಾರ್ಥಿಸಿದರು. ಆಚಾಪುರ ಗ್ರಾಪಂ ವ್ಯಾಪ್ತಿ ಲಕ್ಕವಳ್ಳಿ ಗ್ರಾಮಸ್ಥರು ಅಲಂಕರಿಸಿದ ಎತ್ತಿನಗಾಡಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.
ಹೊಸಗುಂದದ ಶ್ರೀ ಉಮಾಮಹೇಶ್ವರ, ಕಣ್ಣೂರಿನ ಶ್ರೀ ಕಣ್ವೇಶ್ವರ, ಬಸವನಬೀದಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ, ಗ್ರಾಮದೇವರಾದ ಶ್ರೀಲಕ್ಷ್ಮೀರಂಗನಾಥ ಸ್ವಾಮಿ ಮತ್ತು ಕಡ್ಲೆಹಂಕ್ಲು ಶ್ರೀಮಾರಿಕಾಂಬಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.