

ಹಾಸನ: 2017ರಿಂದಲೂ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೈಸೂರಿಗೆ ಕರೆತರು ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಕೊನೇ ಕ್ಷಣದಲ್ಲಿ ಎಲ್ಲವೂ ಬದಲಾಗುತ್ತಿತ್ತು. ಆದರೆ ಈ ಬಾರಿ 'ವಿಶ್ವ ಯೋಗ ದಿನ' ಆಚರಣೆಗೆ ಪ್ರಧಾನಿ ಅವರು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ಜೂ.21ರಂದು ಪ್ರಧಾನಿ ಸ್ವಾಗತಕ್ಕೆ ಮೈಸೂರು ಸಜ್ಜಾಗುತ್ತಿದೆ.
ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೃಹತ್ ಸಾಮೂಹಿಕ ಯೋಗ ಸಮಾರಂಭವನ್ನು ದೇಶದ ವಿವಿಧ ನಗರದಲ್ಲಿ ಕೈಗೊಳ್ಳಲಾಗುತ್ತದೆ. ಈ ಬಾರಿ ಮೈಸೂರು ನಗರವನ್ನು ಆಯ್ಕೆ ಮಾಡಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯೋಗ ದಿನಾಚರಣೆ ಸಮಾರಂಭ ನಡೆಯಲಿದೆ. ಅದಕ್ಕಾಗಿ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸಂಬಂಧಪಟ್ಟ ಇಲಾಖೆಗಳಿಗೂ ಸೂಚನೆ ನೀಡಿ ತಯಾರಿ ಮಾಡಿಕೊಳ್ಳುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೇಂದ್ರ ಆಯುಷ್ ಸಚಿವ ರಾಜೇಶ್ಕುಮಾರ್ ಕೊಟೆಚಾ ಅವರು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಂಸದ ಪ್ರತಾಪ್ ಸಿಂಹ, ಸಮಸ್ತ ಕನ್ನಡಿಗರು ಮತ್ತು ಮೈಸೂರಿಗರ ಪರವಾಗಿ ಪ್ರಧಾನಿ ಅವರನ್ನು ಸ್ವಾಗತಿಸುತ್ತೇವೆ. ಕಳೆದ ಏ.5ರಂದು ನಾನು ಮತ್ತು ನನ್ನ ಕುಟುಂಬವು ಪ್ರಾಹ್ಲಾದ್ ಜೋಷಿ ಅವರೊಂದಿಗೆ ನರೇಂದ್ರ ಮೋದಿ ಅವರನ್ನ ಖುದ್ದು ಭೇಟಿಯಾಗಿ ಮೈಸೂರಿಗೆ ಆಗಮಿಸಲು ಮನವಿ ಮಾಡಿದೆವು. ಮೈಸೂರು 'ಸಿಟಿ ಆಫ್ ಯೋಗ' ಎಂದು ಪ್ರಸಿದ್ಧ ಪಡೆದಿದೆ. ಮಹಾರಾಜರು, ಅಯ್ಯಂಗಾರರು, ಕೃಷ್ಣಮಾಚಾರಿ, ಪಟ್ಟಾಭಿಯವರು ಯೋಗ ಪೋಷಕರಾಗಿದ್ದಾರೆ. ಅವರೆಲ್ಲ ಪ್ರೋತ್ಸಾಹದಿಂದ ಮೈಸೂರು ಸಿಟಿ ಆಫ್ ಯೋಗ ಎನಿಸಿಕೊಂಡಿದೆ. ನಮ್ಮ ಮನವಿಗೆ ಸ್ಪಂದಿಸಿದ ಮೋದಿ ಅವರು ಮೈಸೂರಿಗೆ ಬರುತ್ತಿರುವುದು ಅತೀವ ಸಂತೋಷ ತಂದಿದೆ ಎಂದರು.
ಯೋಗ ದಿನದಂದು ಸುಮಾರು ಒಂದೂವರೆ ಲಕ್ಷ ಯೋಗಪಟು ಒಂದೆಡೆ ಸೇರಿ ಯೋಗ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಪ್ರತಾಪ್ ಸಿಂಹ ವಿವರಿಸಿದರು.