

ಮೈಸೂರು: ನಾಡಹಬ್ಬ ದಸರಾ ಉದ್ಘಾಟನೆಗಾಗಿ ಮೈಸೂರಿಗೆ ಸೋಮವಾರ ಬೆಳಗ್ಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಚಾಮುಂಡಿಬೆಟ್ಟಕ್ಕೆ ಆಗಮಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ದೇವಿ ಸನ್ನಿಧಿಯಲ್ಲಿ ದಸರೆಗೆ ಬೆಳಗ್ಗೆ 9.45ರಿಂದ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿ ಮುನ್ನುಡಿ ಬರೆಯಲಿದ್ದಾರೆ. ದೇಶದ ಪ್ರಥಮ ಪ್ರಜೆಯಿಂದ ಉದ್ಘಾಟನೆ ಆಗುತ್ತಿರುವುದು ಇದೇ ಮೊದಲು. ಬಳಿಕ ಸಾಲು ಸಾಲು ದಸರಾ ಚಟುವಟಿಕೆಗಳು ಅನಾವರಣಗೊಳ್ಳಲಿದೆ.
ಮೈಸೂರಿನ ಕಾರ್ಯಕ್ರಮದ ನಂತರ ನೇರವಾಗಿ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಗರದ ದೇಶಪಾಂಡೆ ನಗರ ಕೆಜಿಎ ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪೌರಸನ್ಮಾನ ಸ್ವೀಕರಿಸುವರು.
ಚಾಮುಂಡಿಬೆಟ್ಟದ ದೇವಸ್ಥಾನದ ಪ್ರಾಂಗಣದಲ್ಲಿ ವಿಶೇಷ ಹೂವಿನಿಂದ ಅಲಂಕಾರ ಮಾಡಲಾಗಿದೆ. ಉತ್ಸವಮೂರ್ತಿಗೆ ಶ್ವೇತ ವರ್ಣದ ಸೀರೆಧಾರಣೆ ಮಾಡಲಾಗಿದೆ.